ವಿಜಯಪುರ: ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ 108 ವಾಹನದಲ್ಲೇ ಹೆರಿಗೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಾನ್ಯಾಳ ಗ್ರಾಮದ ರಮಿಜಾ ಜಾವೇದ ತಾಂಬೋಳಿ ಅವರಿಗೆ ಹೆರಿಗೆಯಾಗಿದೆ. ರಮಿಜಾ ಅವರನ್ನು ಹೆರಿಗೆಗಾಗಿ ಕಾನ್ಯಾಳ ಗ್ರಾಮದಿಂದ ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಗೆ 108 ಅಂಬುಲೆನ್ಸ್ ನಲ್ಲಿ ತರಲಾಗಿತ್ತು. ಈ ವೇಳೆ ಅವರನ್ನು ಪರೀಕ್ಷೆಗೆ ಒಳಪಡಿಸಿದ ಆಸ್ಪತ್ರೆ ಸಿಬ್ಬಂದಿ ಜಾಸ್ತಿ ಬಿಪಿ ಇದೆ ಇಲ್ಲಿ ಹೆರಿಗೆ ಮಾಡಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಸ್ಪತ್ರೆಗೆ ರವಾನಿಸಿದ್ರು.
108 ಅಂಬುಲೆನ್ಸ್ ನಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಮನಗೂಳಿಯಲ್ಲಿ ಹೆರಿಗೆ ನೋವು ಜಾಸ್ತಿಯಾದಾಗ 108 ಸಿಬ್ಬಂದಿಯೇ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ವೇಳೆ 108 ಅಂಬುಲೆನ್ಸ್ ಸಿಬ್ಬಂದಿಗೆ ಮಗುವಿನ ಕುತ್ತಿಗೆಗೆ ಹುರಿ ಬಿದ್ದಿರುವುದು ಗೊತ್ತಾಗಿದೆ. ಆದರೂ ಮಹಿಳೆಯ ಹೆರಿಗೆಯನ್ನು ಸರಳವಾಗಿ ಅಂಬುಲೆನ್ಸ್ ನಲ್ಲಿಯೇ ಮಾಡಿಸಿದ್ದಾರೆ. ಇದರಿಂದ ತುಂಬಾ ಖುಷಿಯಾಗಿ ಮಹಿಳೆಯ ಸಂಬಂಧಿಕರು 108 ಅಂಬುಲೆನ್ಸ್ ಸಿಬ್ಬಂದಿ ಇಒಖಿ ವಿಜಯಕುಮಾರ ಲಿಂಗದಳ್ಳಿ ಹಾಗೂ ವಿಜಯ ಗದ್ದನಕೇರಿ ಅವರನ್ನು ಅಭಿನಂದಿಸಿದರು.
ಅಪರೂಪಕ್ಕೊಮ್ಮೆ ನಡೆಯುವ ಇಂತಹ ಘಟನೆಗಳು 108 ಸಿಬ್ಬಂದಿಯ ಹೃದಯ ವೈಶಾಲ್ಯತೆಗೆ ಕೈಗನ್ನಡಿಯಾಗಿವೆ. ರಮೀಜಾಗೆ ಗಂಡು ಮಗು ಜನಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.