Connect with us

1ನೇ ತರಗತಿ ಬಾಲಕನ ಹೊಟ್ಟೆಗೆ ಚಾಕು ಇರಿದ 6ನೇ ಕ್ಲಾಸ್ ವಿದ್ಯಾರ್ಥಿನಿ- ಪ್ರಿನ್ಸಿಪಲ್ ಅರೆಸ್ಟ್

1ನೇ ತರಗತಿ ಬಾಲಕನ ಹೊಟ್ಟೆಗೆ ಚಾಕು ಇರಿದ 6ನೇ ಕ್ಲಾಸ್ ವಿದ್ಯಾರ್ಥಿನಿ- ಪ್ರಿನ್ಸಿಪಲ್ ಅರೆಸ್ಟ್

ಲಕ್ನೋ: ಶಾಲೆಯ ಟಾಯ್ಲೆಟ್‍ನಲ್ಲಿ 1ನೇ ತರಗತಿ ವಿದ್ಯಾರ್ಥಿ ಮೇಲೆ ಹಿರಿಯ ವಿದ್ಯಾರ್ಥಿನಿ ಚಾಕುವಿನಿಂದ ಹಲ್ಲೆ ಮಾಡಿರೋ ಆಘಾತಕಾರಿ ಘಟನೆ ಉತ್ತರಪ್ರದೇಶ ರಾಜಧಾನಿ ಲಕ್ನೋದಲ್ಲಿ ನಡೆದಿದೆ.

ಬಾಲಕನ ಮೇಲೆ 6ನೇ ತರಗತಿಯ ವಿದ್ಯಾರ್ಥಿನಿ ಹಲ್ಲೆ ಮಾಡಿದ್ದಾಳೆಂದು ಪೊಲೀಸರು ಹೇಳಿದ್ದಾರೆ. ವಿಷಯವನ್ನು ಒಂದು ದಿನದವರೆಗೆ ಮುಚ್ಚಿಟ್ಟ ಶಾಲೆಯ ಮುಖ್ಯೋಪಾಧ್ಯಾಯರನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಇಲ್ಲಿನ ಬ್ರೈಟ್‍ಲ್ಯಾಂಡ್ ಶಾಲೆಯಲ್ಲಿ ಬಾಲಕನ ಮೇಲೆ ವಿದ್ಯಾರ್ಥಿನಿ ಟಾಯ್ಲೆಟ್‍ನಲ್ಲಿ ದಾಳಿ ಮಾಡಿದ್ದಾಳೆಂದು ಪೋಷಕರು ಹೇಳಿದ್ದಾರೆ. ಬುಧವಾರದಂದು ಪೋಷಕರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಬಾಲಕನಿಗೆ ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ನನ್ನ ಮಗನಿಗೆ ಗಾಯವಾಗಿದೆ ಎಂದು ಶಾಲೆಯವರು ತಿಳಿಸಿದ್ರು. ಆತನ ಮೇಲೆ ಹುಡುಗಿಯೊಬ್ಬಳು ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ ಎಂದು ಬಾಲಕನ ತಂದೆ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಬ್ಲೂ ವೇಲ್ ಗೇಮ್‍ನ ಭಾಗವಾಗಿ ಈ ಕೃತ್ಯ ನಡೆದಿರಬಹುದು ಎಂದು ಶಾಲೆಯ ಅಧಿಕಾರಿಗಳು ಶಂಕಿಸಿದ್ದಾರೆ.

ಶಾಲೆಯವರು ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು, ಚಾಕುವಿನಂತಹ ಚೂಪಾದ ವಸ್ತುವಿನಿಂದ ಇರಿಯಲಾಗಿದೆ ಎಂದು ಬಾಲಕನಿಗೆ ಚಿಕಿತ್ಸೆ ನೀಡ್ತಿರೋ ವೈದ್ಯರಾದ ಸಂದೀಪ್ ತಿವಾರಿ ಹೇಳಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಇಂದು ಆಸ್ಪತ್ರೆಯಲ್ಲಿ ಬಾಲಕನನ್ನು ಭೇಟಿಯಾಗಿದ್ದಾರೆ.

ಬಾಲಕನ ಮೇಲಿನ ದಾಳಿಯ ಬಗ್ಗೆ ಬುಧವಾರದಂದು ಶಾಲೆಯಲ್ಲಿ ಸುದ್ದಿ ಹರಡಿದ ನಂತರ ಹಲವಾರು ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ಗುರಗಾಂವ್‍ನ ರಯಾನ್ ಅಂತರಾಷ್ಟ್ರೀಯ ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್ ಎಂಬಾತನ ಮೇಲೆ 11ನೇ ಕ್ಲಾಸ್ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪರೀಕ್ಷೆ ಹಾಗೂ ಪೇರೆಂಟ್ಸ್ ಮೀಟಿಂಗ್ ಮುಂದೂಡುವ ಸಲುವಾಗ ವಿದ್ಯಾರ್ಥಿ ಈ ಕೃತ್ಯವೆಸಗಿದ್ದ ಎಂದು ಪೊಲೀಸರು ಹೇಳಿದ್ದರು.