ಅಡಿಲೇಡ್ ಪಂದ್ಯದಲ್ಲಿ ಮತ್ತೊಮ್ಮೆ ದ್ರಾವಿಡ್ ನೆನಪಿಸಿದ ಚೇತೇಶ್ವರ ಪೂಜಾರ

Public TV
2 Min Read
rahul dravid pujara

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದ್ದು, ಪಂದ್ಯ ಗೆಲ್ಲಲು ಪ್ರಮುಖ ಕಾರಣರಾಗಿದ್ದ ಅನುಭವಿ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೇ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲೂ ಅರ್ಧ ಶತಕ ಸಿಡಿಸುವ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾ ಮಾಜಿ ಆಟಗಾರ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ನೆನಪಿಸಿದ್ದಾರೆ.

rahul dravid

ಅಡಿಲೇಡ್ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಹಾಗು ರಾಹುಲ್ ದ್ರಾವಿಡ್ ಅವರ ಈ ಹಿಂದಿನ ಬ್ಯಾಟಿಂಗ್ ದಾಖಲೆಗಳಲ್ಲಿ ಹಲವು ಸಾಮ್ಯತೆಗಳು ಕಾಣಿಸಿದೆ. 2003 ರಲ್ಲಿ ಆಸೀಸ್ ಪ್ರವಾಸ ಕೈಗೊಂಡಿದ್ದ ರಾಹುಲ್ ದ್ರಾವಿಡ್ ಅಡಿಲೇಡ್ ಕ್ರೀಡಾಂಗಣದಲ್ಲಿ ಮೊದಲ ಶತಕ ಸಿಡಿಸಿದ್ದರು. ಚೇತೇಶ್ವರ ಪೂಜಾರ ಕೂಡ ಅಡಿಲೇಡ್ ಕ್ರೀಡಾಂಗಣದಲ್ಲಿ ತಮ್ಮ ಶತಕ ಪೂರೈಸಿದ್ದಾರೆ. ವಿಶೇಷವೆಂದರೆ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಬ್ಬರು ಶತಕ ಸಿಡಿಸಿದ್ದರು. ಅಲ್ಲದೇ 2ನೇ ಇನ್ನಿಂಗ್ಸ್ ನಲ್ಲಿ ಅರ್ಧ ಶತಕ ಸಿಡಿದ್ದರು.

2003ರ ಟೆಸ್ಟ್ ಸರಣಿಯ ಬ್ರಿಸ್ಬೇನ್ ನಲ್ಲಿ ನಡೆ ಮೊದಲ ಪಂದ್ಯ ಡ್ರಾ ಆಗಿದ್ದರೆ, ಅಡಿಲೇಡ್ ನಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 4 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದ ರಾಹುಲ್ ದ್ರಾವಿಡ್ ಮೊದಲ ಇನ್ನಿಂಗ್ಸ್ ನಲ್ಲಿ 233 ರನ್(446 ಎಸೆತ, 23 ಬೌಂಡರಿ, 1 ಸಿಕ್ಸರ್) ಹೊಡೆದಿದ್ದರೆ ಎರಡನೇ ಇನ್ನಿಂಗ್ಸ್ ನಲ್ಲಿ ಔಟಾಗದೇ 72 ರನ್(170 ಎಸೆತ, 7 ಬೌಂಡರಿ) ಹೊಡೆದಿದ್ದರು. ಪೂಜರಾ ಮೊದಲ ಇನ್ನಿಂಗ್ಸ್ ನಲ್ಲಿ 123 ರನ್(546 ಎಸೆತ, 7 ಬೌಂಡರಿ, 2 ಸಿಕ್ಸರ್) ಬಾರಿಸಿದ್ದರೆ ಎರಡನೇ ಇನ್ನಿಂಗ್ಸ್ ನಲ್ಲಿ 71 ರನ್(204 ಎಸೆತ, 9 ಬೌಂಡರಿ) ಹೊಡೆದಿದ್ದರು. ಅಷ್ಟೇ ಅಲ್ಲದೇ ದ್ರಾವಿಡ್ ಮತ್ತು ಪೂಜಾರ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ.

pujara

ಪಂದ್ಯದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಟೆಸ್ಟ್ ಕ್ರಿಕೆಟ್‍ನಲ್ಲಿ 5 ಸಾವಿರ ರನ್ ಪೂರೈಸಿದ ಹೆಗ್ಗಳಿಕೆಯನ್ನ ಪೂಜಾರ ಪಡೆದರು. ಕಾಕತಾಳೀಯ ಎಂಬಂತೆ ರಾಹುಲ್ ಹಾಗೂ ಪೂಜಾರ ತಮ್ಮ ವೃತ್ತಿ ಜೀವನದಲ್ಲಿ 3 ಸಾವಿರ (67 ಇನ್ನಿಂಗ್ಸ್), 4 ಸಾವಿರ (84 ಇನ್ನಿಂಗ್ಸ್), 5 ಸಾವಿರ (108 ಇನ್ನಿಂಗ್ಸ್) ರನ್ ಗಳನ್ನು ಪೂರೈಸಿದ್ದರು.

ಉಳಿದಂತೆ ಆಸೀಸ್ ಟೂರ್ನಿಯ ಮೊದಲ ಟೆಸ್ಟ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಪೂಜಾರ ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ಈ ಗೌರವಕ್ಕೆ ಪಾತ್ರರಾದರು. ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಪೂಜಾರ ಮೊದಲ ಇನ್ನಿಂಗ್ಸ್ ನಲ್ಲಿ 123 ರನ್, 2ನೇ ಇನ್ನಿಂಗ್ಸ್ ನಲ್ಲಿ ಮಹತ್ವದ 71 ರನ್ ಗಳಿಸಿದ್ದರು. ಇದರೊಂದಿಗೆ ಒಂದೇ ಪಂದ್ಯದಲ್ಲಿ ಶತಕ, ಅರ್ಧ ಶತಕ ಎರಡನ್ನು ಮೊದಲ ಬಾರಿಗೆ ಪೂರೈಸಿದರು. ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೊಹ್ಲಿ ಪೂಜಾರ ಬ್ಯಾಟಿಂಗನ್ನು ಬೆಲೆ ಕಟ್ಟಲಾಗದ್ದು ಎಂದು ಕೊಂಡಾಡಿದ್ದಾರೆ. ಅಲ್ಲದೇ ರಹಾನೆ, ಪೂಜಾರ ನಡುವಿನ 2ನೇ ಇನ್ನಿಂಗ್ಸ್ ಜೊತೆಯಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

dravid

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *