ವಿಜಯಪುರ: ಈ ಹಿಂದೆ ಕೊರೆಸಲಾಗಿದ್ದ ಬೋರ್‌ವೆಲ್ ನಿಂದ ಇದ್ದಕ್ಕಿದ್ದಂತೆ ನೀರು ಉಕ್ಕಿ ಹರಿಯುತ್ತಿರುವ ಘಟನೆ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಗಂಗನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.
ಗಂಗನಹಳ್ಳಿಯಲ್ಲಿ ಗ್ರಾಮದ ಮಾಳಿಂಗರಾಯ ದೊಡಮನಿ ಎಂಬವರ ಜಮೀನಿನಲ್ಲಿರುವ ಬೋರ್‌ವೆಲ್‌ನಿಂದ ನೀರು ಚಿಮ್ಮುತ್ತಿದೆ. ದೊಡಮನಿ ಅವರು ತಮ್ಮ ಜಮೀನಿನಲ್ಲಿ ಆರು ತಿಂಗಳ ಹಿಂದೆ ಬೋರ್‌ವೆಲ್ ಕೊರೆಸಿದ್ದರು. ಆದರೆ ಆಗ ಬೋರ್‌ವೆಲ್‌ನಿಂದ ನೀರು ಬಂದಿರಲಿಲ್ಲ. ಆದರೆ ಇಂದು ಇದ್ದಕ್ಕಿದ್ದಂತೆ ತನ್ನಿಂದ ತಾನೇ ಯಾವುದೆ ಮೋಟಾರ್ ಇಲ್ಲದೆ ಬೋರ್‌ವೆಲ್‌ನಿಂದ ಆಕಾಶದೆತ್ತರಕ್ಕೆ ನೀರು ಚಿಮ್ಮುತ್ತಿದೆ.
ಇದನ್ನು ಕಂಡ ರೈತನ ಮೊಗದಲ್ಲಿ ಸಂತಸ ಮೂಡಿದೆ. ಈ ಬಗ್ಗೆ ತಿಳಿದ ಗ್ರಾಮದ ಜನರು ಚಿಮ್ಮುತ್ತಿರುವ ನೀರನ್ನು ನೋಡಲು ಮುಗಿಬಿದ್ದಿದ್ದರು. ಜೊತೆಗೆ ಆಕಾಶದೆತ್ತರಕ್ಕೆ ಚಿಮ್ಮುತ್ತಿರುವ ನೀರಿನ ವಿಡಿಯೋವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.
ಕೊರೆಸಲಾಗಿದ್ದ ಸಣ್ಣ ಪೈಪಿನಲ್ಲಿ ಮೊದಲು ನೀರಿನ ಶಬ್ದ ಕೇಳಿಸುತ್ತದೆ. ನಂತರ ನಿಧಾನವಾಗಿ ನೀರು ಮೇಲಕ್ಕೆ ಬಂದು ಆಕಾಶದೆತ್ತರಕ್ಕೆ ಹಾರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮೊನ್ನೆ ರಾತ್ರಿ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗಿರಬೇಕೆಂದು ಸ್ಥಳೀಯರು ಹೇಳುತ್ತಿದ್ದಾರೆ.