ರಾಹುಲ್‌-ಯಶಸ್ವಿ ದಾಖಲೆಯ ಶತಕದ ಜೊತೆಯಾಟ – ಭಾರತಕ್ಕೆ 218 ರನ್‌ಗಳ ಮುನ್ನಡೆ

Public TV
2 Min Read
KL Rahul 2

– 2 ಸಿಕ್ಸರ್‌ ಸಿಡಿಸಿ ವಿಶೇಷ ದಾಖಲೆ ಬರೆದ ಜೈಸ್ವಾಲ್‌

ಪರ್ತ್: ಯಶಸ್ವಿ ಜೈಸ್ವಾಲ್‌ (Yashasvi Jaiswal) ಹಾಗೂ ಕೆ.ಎಲ್‌ ರಾಹುಲ್‌ (KL Rahul) ಅವರ ದಾಖಲೆಯ ಶತಕದ ಜೊತೆಯಾಟ ನೆರವಿನಿಂದ ಟೀಂ ಇಂಡಿಯಾ (Team India) ಆಸೀಸ್‌ ವಿರುದ್ಧ 218 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.

ಪರ್ತ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯ 2ನೇ ದಿನದ ಅಂತ್ಯಕ್ಕೆ ಯಾವುದೇ ವಿಕೆಟ್‌ ನಷ್ಟವಿಲ್ಲದೇ ಭಾರತ 172 ರನ್‌ ಕಲೆಹಾಕಿದೆ. ಈ ಮೂಲಕ ಆಸ್ಟ್ರೇಲಿಯಾ (Australia) ವಿರುದ್ಧ 218 ರನ್‌ಗಳ ಮುನ್ನಡೆ ಸಾಧಿಸಿದೆ. ಯಶಸ್ವಿ ಜೈಸ್ವಾಲ್‌ ಅಜೇಯ 90 ರನ್‌ (193 ಎಸೆತ, 7 ಬೌಂಡರಿ, 2 ಸಿಕ್ಸರ್‌), ಕೆ.ಎಲ್‌ ರಾಹುಲ್‌ 62 ರನ್‌ (153 ಎಸೆತ, 4 ಬೌಂಡರಿ) ಗಳಿಸಿದ್ದು, ಭಾನುವಾರ 3ನೇ ದಿನದ ಆಟ ಮುಂದುವರಿಸಲಿದ್ದಾರೆ.

Ind vs Aus 1

67 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ ಇಂದು 2ನೇ ದಿನದ ಆಟ ಆರಂಭಿಸಿತು. ಆದ್ರೆ 104 ರನ್‌ ಗಳಿಸುವಷ್ಟರಲ್ಲೇ ಉಳಿದ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ 46 ರನ್‌ಗಳ ಮುನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ 2ನೇ ದಿನ ವಿಕೆಟ್‌ ಬಿಟ್ಟುಕೊಡದೇ ಆಸೀಸ್‌ ವಿರುದ್ಧ ಹಿಡಿತ ಸಾಧಿಸಿದೆ.

Ind vs Aus 2 1

ʻಯಶಸ್ವಿʼಸಿಕ್ಸರ್‌ ದಾಖಲೆ:
ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್‌ ರಾಹುಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ನಿಧಾನಗತಿಯ ಬ್ಯಾಟಿಂಗ್‌ ಮಾಡಿದರೂ, ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ದಿನದ ಅಂತ್ಯಕ್ಕೆ 57 ಓವರ್‌ಗಳಲ್ಲಿ 172 ರನ್‌ಗಳ ಜೊತೆಯಾಟ ನೀಡಿದರು. ಈ ಮೂಲಕ ಕಳೆದ 20 ವರ್ಷಗಳಲ್ಲಿ ಪರ್ತ್‌ ಕ್ರೀಡಾಂಗಣದಲ್ಲಿ ಅತಿದೊಡ್ಡ ಜೊತೆಯಾಟ ನೀಡಿದ ಜೋಡಿ ಎಂಬ ದಾಖಲೆಗೆ ಪಾತ್ರರಾದರು. ಇದೇ ವೇಳೆ 193 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 90 ರನ್‌ ಸಿಡಿಸಿದ ಜೈಸ್ವಾಲ್‌ ಒಂದೇ ವರ್ಷದಲ್ಲಿ ಅತಿಹೆಚ್ಚು (34) ಸಿಕ್ಸರ್‌ ಸಿಡಿಸಿದ ವಿಶೇಷ ದಾಖಲೆಯನ್ನೂ ಹೆಗಲಿಗೇರಿಸಿಕೊಂಡರು.

KL Rahul

150ಕ್ಕೆ ಭಾರತ ಆಲೌಟ್:
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಮೊದಲ ದಿನ 150 ರನ್‌ಗಳಿಗೆ ಆಲೌಟ್‌ ಆಗಿತ್ತು. ನಿತೀಶ್ ಕುಮಾರ್ ರೆಡ್ಡಿ 41 ರನ್ (59 ಎಸೆತ, 6 ಬೌಂಡರಿ, 1 ಸಿಕ್ಸರ್), ರಿಷಬ್ ಪಂತ್ 37 ರನ್ (78 ಎಸೆತ, 3 ಬೌಂಡರಿ, 1 ಸಿಕ್ಸರ್), ರನ್ ಕೆ.ಎಲ್ ರಾಹುಲ್ 26 ರನ್ (74 ಎಸೆತ, 3 ಬೌಂಡರಿ) ಗಳಿಸಿದ್ದು ಬಿಟ್ಟರೆ, ಉಳಿದವರು ಅಲ್ಪ ಮೊತ್ತಕ್ಕೆ ಆಲೌಟ್ ಆದರು. ಆರಂಭಿಕ ಯಶಸ್ವಿ ಜೈಸ್ವಾಲ್, ದೇವದತ್ ಪಡಿಕಲ್ ಶೂನ್ಯ ಸುತ್ತಿದ್ದರು.

ಆಸೀಸ್‌ 104ಕ್ಕೆ ಆಲೌಟ್‌:
ಮೊದಲ ದಿನದಾಟದಲ್ಲಿ 67 ರನ್‌ಗಳಿಗೆ 7 ವಿಕೆಟ್‌ ಕಳೆದಿಕೊಂಡಿದ್ದ ಆಸೀಸ್‌ 2ನೇ ದಿನ 104 ರನ್‌ಗಳಿಗೆ ಆಲೌಟ್‌ ಆಯಿತು. ಆರಂಭಿಕ ಉಸ್ಮಾನ್ ಖವಾಜ (8 ರನ್), ನಾಥನ್ ಮೆಕ್‌ಸ್ವೀನಿ (10 ರನ್), ಮಾರ್ನಸ್ ಲಾಬುಶೇನ್ (2 ರನ್), ಟ್ರಾವಿಸ್ ಹೆಡ್ (11 ರನ್), ಸ್ಟೀವ್ ಸ್ಮಿತ್ (0), ಮಿಚೆಲ್ ಮಾರ್ಷ್ (6 ರನ್), ನಾಯಕ ಪ್ಯಾಟ್ ಕಮ್ಮಿನ್ಸ್ (3 ರನ್) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಇನ್ನುಳಿದಂತೆ ಅಲೆಕ್ಸ್‌ ಕ್ಯಾರಿ 21 ರನ್‌, ಮಿಚೆಲ್‌ ಸ್ಟಾರ್ಕ್‌ 26 ರನ್‌, ನಥಾನ್‌ ಲಿಯಾನ್‌ 5 ರನ್‌ ಗಳಿಸಿದ್ರೆ, ಜೋಶ್‌ ಹೇಜಲ್ವುಡ್‌ 7 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

Share This Article