ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ಪೈಶಾಚಿಕ ಕೃತ್ಯದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಉಂಟಾಗಿದೆ. ಉಭಯ ರಾಷ್ಟ್ರಗಳ ನಡುವೆ ಯಾವಾಗ ಬೇಕಾದ್ರೂ ಯುದ್ಧ ಘೋಷಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ನಡುವೆ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಪಾಕ್ ರೇಂಜರ್‌ನನ್ನ (Pakistani Ranger) ರಾಜಾಸ್ಥಾನದ ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಬಂಧಿಸಿದ್ದಾರೆ.
ಅಚಾನಕ್ಕಾಗಿ ಗಡಿ ಪ್ರವೇಶಿಸಿದ್ದ ಭಾರತೀಯ ರೇಂಜರ್‌ನನ್ನು ಬಂಧಿಸಿದ 15 ದಿನಗಳ ಬಳಿಕ ಈ ಘಟನೆ ನಡೆದಿದೆ. ಗಡಿ ಸಮೀಪದ ಪ್ರದೇಶಗಳಲ್ಲಿ ಬೇಹುಗಾರಿಕೆ ನಡೆಸುತ್ತಿದ್ದಾಗ ಬಹಾವಲ್ಪುರ್ ವಲಯದಿಂದ ಬಿಎಸ್‌ಎಫ್ ಪಡೆ ಪಾಕಿಸ್ತಾನಿ ರೇಂಜರ್‌ನನ್ನ ಬಂಧಿಸಿರುವುದಾಗಿ ಬಿಎಸ್‌ಎಫ್ ಅಧಿಕೃತ ಮೂಲಗಳು ತಿಳಿಸಿವೆ.
ಏಪ್ರಿಲ್ 23 ರಂದು ಪಂಜಾಬ್‌ನ ಈ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ರೇಂಜರ್ ಪೂರ್ಣಮ್ ಕುಮಾರ್ ಶಾ ಅವರನ್ನು ಪಾಕ್ ಸೈನಿಕರು ಬಂಧಿಸಿದ್ದರು. ಬಿಎಸ್‌ಎಫ್ ಮಾತುಕತೆಯ ಹೊರತಾಗಿಯೂ ರೇಂಜರ್‌ನನ್ನ ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿದ್ದರು.