ಹೇಳೋದಕ್ಕೆ ಇವರು ಆಸ್ಕರ್ (Oscar) ಪ್ರಶಸ್ತಿ ಪುರಸ್ಕೃತರು. ಆದರೆ ಆಶ್ರಯಕ್ಕೆ ಸೂರಿಲ್ಲ. ಕುಡಿಯೋದಕ್ಕೆ ನೀರಿಲ್ಲ. ಮೋದಿ ಭೇಟಿಯಾದ್ರೂ ಭಾಗ್ಯದ ಬಾಗಿಲು ತೆರೆಯಲಿಲ್ಲ. ಜಗತ್ತೇ ಗುರುತಿಸಿದ ಸ್ಟಾರ್ ಆಗಿದ್ರೂ ಬದುಕು ಬದಲಾಗ್ಲಿಲ್ಲ. ಹೀಗೆ ಭರವಸೆಯ ಬೆಳಕಿನ ಕಡೆ ಇಣುಕುತ್ತಿರುವ ಆಸ್ಕರ್ ಪ್ರಶಸ್ತಿ ಪುರಸ್ಕೃತ ಡಾಕ್ಯುಮೆಂಟ್ರಿ ನಾಯಕ ದಂಪತಿಯೇ ಬೊಮ್ಮನ್ (Bomman) ಹಾಗೂ ಬೆಳ್ಳಿ. `ದಿ ಎಲಿಫೆಂಟ್ ವಿಸ್ಪರರ್ಸ್’ ಆಸ್ಕರ್ ಡಾಕ್ಯುಮೆಂಟ್ರಿಯ ಕಥಾ ನಾಯಕ ನಾಯಕಿ. ಹೇಗಿದೆ ಇವರ ಬದುಕೀಗ? ಆಸ್ಕರ್ ಬಂದ್ಮೇಲೆ ಬದಲಾಯಿತೆ? ಆಸ್ಕರ್ ಪ್ರಶಸ್ತಿ ಹಿಡಿದ ಕೈಗಳಿಗೆ ಕೊನೆ ಪಕ್ಷ ಮೂರ್ ಹೊತ್ತು ಸರಿಯಾಗಿ ಊಟ ಸಿಗುತ್ತಿದೆಯೇ? ಅದರ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
Advertisement
ಕಮರ್ಷಿಯಲ್ ಸಿನಿಮಾಗಳನ್ನೇ ನೋಡದಿರುವ ಈ ಕಾಲದಲ್ಲಿ ಇಡೀ ವಿಶ್ವ ಒಂದು ಸಾಕ್ಷ್ಯಚಿತ್ರದತ್ತ ತಿರುಗಿ ನೋಡುತ್ತದೆ ಎಂದರೆ ಅದಕ್ಕೆ ಕಾರಣ ಆಸ್ಕರ್ ಪ್ರಶಸ್ತಿ. 2022ನೇ ಸಾಲಿನ ಆಸ್ಕರ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡ ಭಾರತದ ಸಾಕ್ಷ್ಯ ಚಿತ್ರವೇ `ದಿ ಎಲಿಫೆಂಟ್ ವಿಸ್ಪರರ್ಸ್’ (The Elephant the elephant Whisperers). ಆನೆ ಹಾಗೂ ಆನೆಯ ಪೋಷಕರ ಸಾಕ್ಷ್ಯಚಿತ್ರವಿದು. ಆಡಂಬರದಿಂದ ತೋರಿಸೋಕೆ ಇದು ಸಿನಿಮಾವಲ್ಲ ಡಾಕ್ಯುಮೆಂಟ್ರಿ. ನಿರಾಶ್ರಿತ ಆನೆಗಳನ್ನ ತಂದು ಪಳಗಿಸಿ ಮಕ್ಕಳಂತೆ ಸಾಕಿ ಸಲಹುವ ಅಸಲಿ ಹೀರೋ ಬೊಮ್ಮನ್ ದಂಪತಿ ಹಾಗೂ ಆನೆಯ ನಂಟಿನ ಕಥೆಯೇ ದಿ ಎಲಿಫೆಂಟ್ ವಿಸ್ಪರರ್ಸ್. ಮಧುಮಲೈ ಅರಣ್ಯ ವ್ಯಾಪ್ತಿಯ ತೆಪ್ಪಕಾಡು ಅರಣ್ಯ ಪ್ರದೇಶದಲ್ಲಿ ಆನೆ ಶಿಬಿರವಿದೆ. ಇದೇ ಶಿಬಿರದಲ್ಲಿ ಆನೆ ಮಾವುತರು ವಾಸವಾಗಿದ್ದಾರೆ. ಆನೆಗಳನ್ನ ಪೋಷಿಸಿ ಪಾಲಿಸಿ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಈ ತಂಡದಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯ ಚಿತ್ರದಲ್ಲಿ ಕಾಣಿಸಿಕೊಂಡ ದಂಪತಿಗಳು ಬೊಮ್ಮನ್ ಹಾಗೂ ಬೆಳ್ಳಿ.
Advertisement
Advertisement
ಪಟ್ಟಣದ ಸಂಪರ್ಕವೇ ಇಲ್ಲದೆ ಪ್ರಕೃತಿ ಜೊತೆ ಬಾಂಧವ್ಯ ಬೆಳೆಸಿಕೊಂಡಿರುವ ಬೊಮ್ಮನ್ ಬೆಳ್ಳಿಗೆ (Belli) ಅವರು ಅವರಾಗಿಯೇ ನಟಿಸಿದ ಡಾಕ್ಯುಮೆಂಟ್ರಿಗೆ ಆಸ್ಕರ್ ಬಂದ್ಮೇಲೆ ಜಗತ್ಪಸಿದ್ಧರಾದ್ರು. ಎಲ್ಲರೂ ಹುಡುಕಿಕೊಂಡು ಬಂದ್ರು. ಆಸ್ಕರ್ ಟ್ರೋಫಿ ಕೈಗಿಟ್ಟು ಫೋಟೋ ತೆಗೆಸಿಕೊಂಡ್ರು. ಅರಣ್ಯ ಅಧಿಕಾರಿಗಳು, ಗಣ್ಯರು ಸೇರಿ ಡಾಕ್ಯುಮೆಂಟ್ರಿ ನಿರ್ಮಾಪಕ, ನಿರ್ದೇಶಕಿಯೂ ಸೇರಿದಂತೆ ಬೊಮ್ಮನ್ ಬೆಳ್ಳಿಯ ಬೆನ್ನು ತಟ್ಟಿದ್ರು. ಆದರೆ ಇದರಿಂದ ಬೊಮ್ಮನ್ ಬೆಳ್ಳಿ ದಂಪತಿಯ ಹೊಟ್ಟೆ ತುಂಬಬೇಕಲ್ಲ. ಹೇಳೋದಕ್ಕೆ `ದಿ ಎಲಿಫೆಂಟ್ ವಿಸ್ಪರರ್ಸ್’ ತಂಡಕ್ಕೆ ಆಸ್ಕರ್ ಬಂದಿದೆ. ಬೊಮ್ಮನ್ ಬೆಳ್ಳಿ ಬದುಕು ಮೂರಾಬಟ್ಟೆಯಾಗಿದೆ. ಪ್ರಶಸ್ತಿ ಬಂದಿರೋದೇ ಇವರಿಗೆ ಶಾಪವಾಗಿ ಪರಿಣಮಿಸಿದೆ. ಅವರು ಬಂದ್ರಂತೆ, ಇವರು ಬಂದ್ರಂತೆ, ಅಷ್ಟು ಕೊಟ್ರಂತೆ, ಇಷ್ಟು ಕೊಟ್ರಂತೆ ಅನ್ನೋದು ಬರೀ ಸುದ್ದಿಯಾಗಿದೆ ಹೊರತು ಸಫಲವಾಗಲಿಲ್ಲ. ಆನೆ ಶಿಬಿರಕ್ಕೆ ಪ್ರಧಾನಿ ಮೋದಿ ಬಂದಾಗ ಹತ್ತಿರದಲ್ಲೇ ನಿಂತು ಮಾತನಾಡುವ ಅವಕಾಶ ಸಿಕ್ಕರೂ ಬೇಡಿಕೆ ಇಡಲು ಅಧಿಕಾರಿಗಳು ಇವರಿಗೆ ಅವಕಾಶ ಕೊಡಲಿಲ್ಲ.
Advertisement
ದಿ ಎಲಿಫೆಂಟ್ ವಿಸ್ಪರರ್ಸ್ ಗೆ ಆಸ್ಕರ್ ಗೌರವ ಸಿಕ್ಕ ಬಳಿಕ ಓಟಿಟಿಯಲ್ಲಿ ಒಳ್ಳೆಯ ಬೆಲೆಗೆ ಸೇಲಾಗಿದೆ. ಕೋಟಿಗಟ್ಟಲೆ ಬಹುಮಾನಗಳನ್ನ ತಂಡ ಪಡೆದುಕೊಂಡಿದೆ. ಆದರೆ ಅದರಲ್ಲಿ ನಯಾಪೈಸೆಯೂ ಬೊಮ್ಮನ್ ಬೆಳ್ಳಿಗೆ ಸಿಗಲಿಲ್ಲ ಅನ್ನೋದೇ ದುರಂತ. ತಮಿಳುನಾಡು ಸಿಎಂ ಸ್ಟಾಲಿನ್ 1 ಲಕ್ಷ ರೂಪಾಯಿ ಹಣ ಕೊಟ್ಟಿದ್ದು ಬಿಟ್ರೆ ಈ ದಂಪತಿಯ ಬದುಕಿನಲ್ಲಿ ವಿಧಿ ಬರೆದ ಹಣೆಬರಹ ಬದಲಾಗಲಿಲ್ಲ. ಕಾಡಿನಲ್ಲೊಂದು ಪುಟ್ಟ ಗುಡಿಸಲು. ಹೇಳಿ ಕೇಳಿ ಹೆಚ್ಚು ಮಳೆಕಾಡಿನ ಭಾಗ. ಆಸ್ತಿ ಪಾಸ್ತಿ ಸಂಪಾದನೆ ಏನೂ ಇಲ್ಲ. ಸರ್ಕಾರ ನೇಮಿಸಿಕೊಂಡ ಕೂಲಿಗಳಿವರು. ಸರ್ಕಾರದ ಅನುಮತಿ ಪಡೆದು ಡಾಕ್ಯುಮೆಂಟ್ರಿ ಚಿತ್ರೀಕರಣಕ್ಕೆ ಅವಕಾಶ ಪಡೆದುಕೊಂಡು ಬಂದಿತ್ತು ತಂಡ. ಅವರು ಹೇಳಿದಂತೆ ನಡೆದುಕೊಂಡು ಬಂದ್ರು ಬೊಮ್ಮನ್ ಬೆಳ್ಳಿ ದಂಪತಿ. ಆಸ್ಕರ್ ಗೌರವ ಏನೆಂಬುದರ ಅರಿವೂ ಇಲ್ಲದ ಮುಗ್ಧಜೀವಗಳಿಗೆ ತಮ್ಮ ಸುತ್ತಮುತ್ತ ಏನಾಗ್ತಿದೆ ಅನ್ನೋ ಅರಿವೂ ಇಲ್ಲ. ಆದರೆ ಸಹ ಮಾವುತರು ಮಾತ್ರ ಅಸೂಯೆ ಪಟ್ಕೊಂಡು ಇನ್ನಷ್ಟು ಸಂಕಷ್ಟಕ್ಕೆ ದೂಡಿಕೊಳ್ಳುವಂತಾಗಿದೆ ಬೊಮ್ಮನ್ ಕುಟುಂಬದ ಸ್ಥಿತಿ.
ನೆತ್ತಿಮೇಲೆ ಸರಿಯಾದ ಸೂರಿಲ್ಲ. ಕುಡಿಯಲು ಒಳ್ಳೆಯ ನೀರೂ ಇಲ್ಲ. ಹೀಗೇ 56 ವರ್ಷ ದೂಡಿದ್ದಾರೆ ಬೊಮ್ಮನ್. ಬಂಡೀಪುರದಲ್ಲಿ ಹುಟ್ಟಿದ್ರಿಂದ ಇವರಿಗೆ ಕನ್ನಡ ಮಾತನಾಡಲು ಬರುತ್ತೆ. ಕಾಡಿನಲ್ಲೇ ಜನನ. ಕಾಡಿನಲ್ಲೇ ಬದುಕು. ಆನೆಗಳೇ ಇವರ ಸ್ನೇಹಿತರು. ಇಂದು ಬೊಮ್ಮನ್ ಬೆಳ್ಳಿ ಹೆಸರಿಗೆ ಆಸ್ಕರ್ ಸಿಕ್ಕಿರೋ ದೊಡ್ಡ ಗೌರವ ಇದೆ. ಆದರೆ ಬಡತನದ ಬೇಗೆಯಲ್ಲೇ ಬೇಯುತ್ತಿರುವ ಕುಟುಂಬಕ್ಕೆ ಹಸಿವಿನ ಮುಂದೆ ಬೇರೆ ಯಾವುದೂ ಲೆಕ್ಕಕ್ಕೆ ಬರೋದಿಲ್ಲ. ಬದುಕು ಬವಣೆಯ ಹಾದಿಯಲ್ಲಿ ಅದೆಷ್ಟೋ ಕಷ್ಟ ಕಣ್ಣಾರೆ ಕಂಡ ಇವರು ಹಿಂದೆ ಕಾಡುಗಳ್ಳ ವೀರಪ್ಪನ್ ಕಥೆಯ ನೆನಪಿಗೆ ಬರ‍್ತಾರೆ. ಡಾ.ರಾಜ್‌ಕುಮಾರ್ ಅವರನ್ನ ವೀರಪ್ಪನ್ ಕಿಡ್ನ್ಯಾಪ್ ಮಾಡಿದ್ದ ವೇಳೆಯೂ ಅದೇ ಕಾಡಿನಲ್ಲಿದ್ದ ಬೊಮ್ಮನ್ ಆ ಪರಿಸ್ಥಿತಿಯನ್ನ ಕಣ್ಣಾರೆ ಕಂಡಿದ್ದಾರೆ. ಸರ್ಕಾರದಿಂದ ಆ ವೇಳೆ ಅನೇಕ ಕಟ್ಟೆಚ್ಚರಗಳು ಶಿಬಿರದ ಮಾವುತರಿಗೆ ಹೇರಲಾಗಿತ್ತು. ಆ ಘಟನೆಯನ್ನೂ ನೆನಪು ಮಾಡಿಕೊಳ್ತಾರೆ ಬೊಮ್ಮನ್.
ಬೊಮ್ಮನ್ ಬೆಳ್ಳಿ ಹುಟ್ಟಿದಾಗಿಂದ ಕಾಡು, ಕಾಡುಪ್ರಾಣಿಗಳು, ಆನೆಗಳನ್ನ ಬಿಟ್ರೆ ಬೇರೇನನ್ನೂ ಕಂಡಿಲ್ಲ ನೋಡಿಲ್ಲ. ಅವರಿಗೆ ಇನ್ಯಾವ ದೊಡ್ಡ ಆಸೆಯೂ ಇಲ್ಲ. ಸಣ್ಣದೊಂದು ಸೌಕರ್ಯದ ಬೇಡಿಕೆ ಇಡ್ತಾರೆ. ಬೆಚ್ಚನೆ ಮಲಗಲೊಂದು ಸೂರು, ಆರೋಗ್ಯದಿಂದಿರಲು ಶುದ್ಧ ಕುಡಿಯುವ ನೀರು. ಆಸ್ಕರ್ ಪುರಸ್ಕೃತರಿಗೆ ಇಷ್ಟೂ ಸೌಲಭ್ಯಗಳಿಲ್ಲವೇ? ಅಸಲಿಗೆ ಬೊಮ್ಮನ್ ಬೆಳ್ಳಿ ಬದುಕೇ ಮಾವುತರ ಕೈಗೆ ಸಿಕ್ಕಿರುವ ಆನೆಯಂತಾಗಿದೆ. ಇದೇ ನೋಡಿ ವಾಸ್ತವ.