ದಾವಣಗೆರೆ: PSI ಹಗರಣದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಇದ್ದಾರೆ. ಅದರ ಹಿಂದೆ ಹಿಂದಿನ ಗೃಹ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರೂ ಇದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆಯ ಬಾಪೂಜಿ ಅತಿಥಿ ಗೃಹಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು `ಸಿದ್ದರಾಮಯ್ಯ ಅಮೃತ ಮಹೋತ್ಸವ’ ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲನೆ ಮಾಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಿಎಸ್‌ಐ ಹಗರಣದ ಹಿಂದೆ ಹಿಂದಿನ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಹಾಲಿ ಗೃಹ ಸಚಿವರು ಇದ್ದಾರೆ. ಈಗ ಅಮೃತ್ ಪೌಲ್ ಅವರನ್ನು ಬಂಧಿಸಿದ್ದಾರೆ. ಇದರಲ್ಲಿ ಬಿಜೆಪಿ ಇರಲಿ ಕಾಂಗ್ರೆಸ್ ಇರಲಿ, ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ. ಸರ್ಕಾರದ ಕುಮ್ಮಕ್ಕು ಇಲ್ಲದೇ ಇವೆಲ್ಲ ನಡಿಯೋಕೆ ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ.
ಇದೊಂದು ಮೈಲಿಗಲ್ಲು: 75 ವರ್ಷ ತುಂಬುವುದರಿಂದ ಇದೊಂದು ಮೈಲುಗಲ್ಲು. ಸ್ನೇಹಿತರು, ಅತ್ಮೀಯರು ಸೇರಿ ಅಮೃತೋತ್ಸವ ಮಾಡ್ತಾ ಇದ್ದಾರೆ. ಇದು ಸಿದ್ದರಾಮೋತ್ಸವ ಅಲ್ಲ. ಹೀಗೆ ಕರೆದವರು ಆರ್‌ಎಸ್‌ಎಸ್‌ನವರು. ನಾನು ಹುಟ್ಟುಹಬ್ಬ ಮಾಡಿಕೊಳ್ಳುವುದಿಲ್ಲ. ಅತ್ಮೀಯರು, ಸ್ನೇಹಿತರು ಮಾಡ್ತಾ ಇದಾರೆ. ಕೆ.ಎನ್.ರಾಜಣ್ಣ ಸಮಿತಿಯ ಅಧ್ಯಕ್ಷರಾಗಿದ್ದು, ಬೈರತಿ ಬಸವರಾಜ್ ಖಜಾಂಚಿಯಾಗಿ ಸಮಾರಂಭ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
75 ವರ್ಷ ತುಂಬುವ ವರ್ಷಕ್ಕೆ ಇನ್ನು ಚುನಾವಣೆ 8 ತಿಂಗಳು ಇರುತ್ತೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಒಟ್ಟಿನಲ್ಲಿ ನೂರಕ್ಕೆ ನೂರರಷ್ಟು 130 ಸ್ಥಾನಗಳನ್ನಾದರೂ ಗೆದ್ದು ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತ. ಯಾರನ್ನ ಮುಖ್ಯಮಂತ್ರಿ ಮಾಡೋದು ಆಮೇಲೆ ನೋಡೋಣ. ಏಕೆಂದರೆ ಮುಖ್ಯಮಂತ್ರಿ ಮಾಡೋದು ಗೆದ್ದ ಶಾಸಕರಿಗೆ ಹಾಗೂ ಹೈಕಮಾಂಡ್‌ಗೆ ಬಿಟ್ಟ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಪಕ್ಷದಿಂದ ಬಿಜೆಪಿಗೆ ಹೋಗುವವರು ಯಾರೂ ಇಲ್ಲ. ಬಿಜೆಪಿಗೆ ಈಗಾಗಲೇ ಭಯ ಶುರುವಾಗಿದೆ. ಬಾದಾಮಿ, ಕೋಲಾರ, ವರುಣ, ಮೈಸೂರು ಭಾಗಗಳಲ್ಲಿ ಜನ ನಿಲ್ಲಿ ಎಂದು ಕೇಳುತ್ತಿದ್ದಾರೆ. ನಾನು ಈಗ ಬಾದಾಮಿ ಶಾಸಕ. ಈಗಲೇ ಏನೂ ಹೇಳುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ `ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಇಬ್ಭಾಗವಾಗುತ್ತೆ’ ಎನ್ನುವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಉತ್ತರಿಸಿದ ಅವರು, ಅದು ಅವನ ಭ್ರಮೆ. ಈಶ್ವರಪ್ಪ ಮಂತ್ರಿ ಸ್ಥಾನ ಕಳೆದುಕೊಂಡಿದ್ದಾನೆ. ಇದರಿಂದ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದೆ. ಆಗ ಮಾಡಿದ್ದು ಕುರುಬರ ಸಮಾವೇಶ, ಈಗ ಮಾಡ್ತಾ ಇರೋದು ಅಮೃತ ಮಹೋತ್ಸವ. ಇವತ್ತೇ ಚುನಾವಣೆಯಾದರೂ ನಾವು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.