ಮುಂಬೈ: ಏಷ್ಯಾದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆಯನ್ನು ತೆಗೆದುಹಾಕಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ಮಹಾರಾಷ್ಟ್ರದ ಮುಂಬೈನ ಅಂಧೇರಿ ಪ್ರದೇಶದ ನಿವಾಸಿ ಹಿಮಾಂಶು ಅಗರ್‌ವಾಲ್ ಈ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದರು. ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಅಗರ್‌ವಾಲ್, ಅಂಬಾನಿ ಹಾಗೂ ಅವರ ಕುಟುಂಬಕ್ಕೆ ಭದ್ರತೆ ನೀಡುವುದರಿಂದ ರಾಜ್ಯ ಹಾಗೂ ತೆರಿಗೆ ಪಾವತಿದಾರರಿಗೆ ಹೊರೆಯಾಗಲಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
Advertisement
Advertisement
ಇದೇ ಸಂದರ್ಭದಲ್ಲಿ ಅಂಬಾನಿ ಪರ ವಕೀಲರು ಸ್ಪಷ್ಟಪಡಿಸಿ, ಕುಟುಂಬವೂ ಭದ್ರತೆಯ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದೆ. ಹೀಗಾಗಿ ತೆರಿಗೆ ಪಾವತಿಸುವವರ ಮೇಲೆ ಯಾವುದೇ ಹೊರೆಯಾಗುವುದಿಲ್ಲ ಎಂದು ವಾದಿಸಿದರು. ವಾದವನ್ನು ಆಲಿಸಿದ ನ್ಯಾಯಮೂರ್ತಿ ರಂಜಿತ್ ಮೋರ್ ನೇತೃತ್ವದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿತು.
Advertisement
ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಭದ್ರತಾ ಪಡೆ (ಎಸ್‍ಪಿಜಿ)ಯಿಂದ ಭದ್ರತೆ ನೀಡಲಾಗಿದ್ದು, ಉಳಿದಂತೆ ಬೆದರಿಕೆ ಇರುವವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತದೆ. ಝಡ್ ಪ್ಲಸ್ ಭದ್ರತೆಯನ್ನು ರಾಷ್ಟ್ರೀಯ ಭದ್ರತಾ ದಳ(ಎನ್‍ಎಸ್‍ಜಿ) ನೀಡುತ್ತದೆ. ಎಂಪಿ5 ಬಂದೂಕುಗಳು, ಅಧುನಿಕ ಗ್ಯಾಜೆಟ್‍ಗಳು, ಬೆಂಗಾವಲು ವಾಹನಗಳನ್ನು ಹೊಂದಿದೆ ಎಂದು ಅಗರ್‌ವಾಲ್ ಅವರ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
Advertisement
ಮುಕೇಶ್ ಅಂಬಾನಿಯವರ ಕುಟುಂಬ ರಾಜಕೀಯದಲ್ಲಿ ಭಾಗವಹಿಸದಿರುವುದರಿಂದ ಕುಟುಂಬಕ್ಕೆ ಯಾವುದೇ ಬೆದರಿಕೆ ಇಲ್ಲ. ಹೀಗಾಗಿ ಸೈದ್ಧಾಂತಿಕ ಸಂಘರ್ಷಕ್ಕೆ ಕಾರಣಗಳಿಲ್ಲ. ಅಲ್ಲದೆ ಅಂಬಾನಿಯವರ ಮೇಲೆ ಈವರೆಗೆ ದಾಳಿ ನಡೆಸಿರುವ ಹಾಗೂ ದಾಳಿ ನಡೆಸಲು ಪ್ರಯತ್ನಿಸಿರುವ ಪ್ರಕರಣಗಳಿಲ್ಲ. ದೊಡ್ಡ ಬುಸಿನೆಸ್ ಕಂಪನಿ ಸಿಇಓ ಆಗಿರುವವರು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಾರೆ ಎಂದು ಅಗರ್‍ವಾಲ್ ತಿಳಿಸಿದ್ದಾರೆ.
ಜನಸಾಮಾನ್ಯರಿಗೆ ಹೋಲಿಸಿದರೆ ಪೊಲೀಸರ ಅನುಪಾತ ಕಡಿಮೆ ಇದೆ. ಹೀಗಾಗಿ ಭದ್ರತೆಯನ್ನು ತೆಗೆಯಬೇಕು. ಪೊಲೀಸ್ ಸಿಬ್ಬಂದಿ ಕೊರತೆಯಿಂದಾಗಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. 666 ಜನರಿಗೆ ಒಬ್ಬ ಪೊಲೀಸ್ ಹಾಗೂ ಪ್ರತಿ ವಿಐಪಿಗೆ ಮೂವರು ಪೊಲೀಸರಿದ್ದಾರೆ. ಇದು ಸಾರ್ವಜನಿಕ ಹಿತದೃಷ್ಟಿಯಿಂದ ಸಲ್ಲಿಸಿದ ಅರ್ಜಿಯಾಗಿದ್ದು, ಇದರ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ಕೋರಿದ್ದರು. ನ್ಯಾಯಾಲಯ ಅರ್ಜಿದಾರರ ವಾದವನ್ನು ಮಾನ್ಯ ಮಾಡದೇ ತಿರಸ್ಕರಿಸಿದೆ.