ನವದೆಹಲಿ: 184 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್ (Akasa Air) ವಿಮಾನ ಹಾಗೂ ಮುಂಬೈನಿಂದ ದೆಹಲಿಗೆ ಹೊರಟಿದ್ದ ಇಂಡಿಗೂ ವಿಮಾನಗಳಿಗೆ (IndiGo Flight) ಬಾಂಬ್ ಬೆದರಿಕೆ ಬಂದಿದೆ. ಇದು ಕಳೆದ ಮೂರು ದಿನಗಳಲ್ಲಿ 12ನೇ ಬೆದರಿಕೆ ಪ್ರಕರಣ ಆಗಿದೆ.
ಸೋಷಿಯಲ್ ಮೀಡಿಯಾ ಮೂಲಕ ಬಾಂಬ್ ಬೆದರಿಕೆ (Bomb Threats) ಬರುತ್ತಿದ್ದಂತೆ ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್ ವಿಮಾನ QP1335 ಹಾಗೂ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನವನ್ನು (ವಿಮಾನ ಸಂಖ್ಯೆ 6E 651) ಅಹಮದಾಬಾದ್‌ಗೆ ಹಿಂತಿರುಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಎರಡು ದಿನಗಳ ಹಿಂದೆಯಷ್ಟೇ ಮುಂಬೈನಿಂದ ಹೊರಟಿದ್ದ ಏರ್ ಇಂಡಿಯಾ (Air India) ವಿಮಾನಗಳಿಗೂ ಬಾಂಬ್ ಬೆದರಿಕೆ ಬಂದಿತ್ತು. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – ಶೇ.3 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಕ್ಯಾಬಿನೆಟ್ ಅನುಮೋದನೆ
ಬಾಂಬ್ ಬೆದರಿಕೆ ಬೆನ್ನಲ್ಲೇ ಆಕಾಶ ಏರ್‌ನ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ. ಆಕಾಶ ಏರ್‌ನ ಕ್ಯೂಪಿ 1335 ವಿಮಾನವು ದೆಹಲಿಯಿಂದ ಬೆಂಗಳೂರಿಗೆ ಹೊರಟಿತ್ತು. 174 ಪ್ರಯಾಣಿಕರು, ಮೂವರು ಮಕ್ಕಳು ಹಾಗೂ 7 ಸಿಬ್ಬಂದಿ ಸೇರಿ 184 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಬಾಂಬ್ ಬೆದರಿಕೆ ಕೇಳಿಬರುತ್ತಿದ್ದಂತೆ, ತುರ್ತು ನಿರ್ವಹಣಾ ತಂಡಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಿ, ದೆಹಲಿಗೆ ಹಿಂತಿರುಗಿಸುವಂತೆ ಪೈಲಟ್‌ಗಳಿಗೆ ಸೂಚನೆ ನೀಡಲಾಯಿತು. ಸದ್ಯ ನಮ್ಮ ತಂಡಗಳು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿವೆ. ಜೊತೆಗೆ ಬಾಂಬ್ ಬೆದರಿಕೆ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇಂಡಿಗೋ ವಕ್ತಾರರು ಸಹ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ತುರ್ತು ನಿರ್ವಹಣಾ ತಂಡಗಳು ಪರಿಶೀಲನೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಾಸಕಾಂಗ ಪಕ್ಷದ ನಾಯಕನಾಗಿ ಸೈನಿ ಅವಿರೋಧ ಆಯ್ಕೆ – ಎರಡನೇ ಬಾರಿಗೆ ಸಿಎಂ ಆಗಿ ಗುರುವಾರ ಪ್ರಮಾಣವಚನ
ಕಳೆದ ಮೂರು ದಿನಗಳಲ್ಲಿ ಏರ್ ಇಂಡಿಯಾ ದೆಹಲಿ-ನ್ಯೂಯಾರ್ಕ್ ವಿಮಾನ, ದಮ್ಮಾಮ್-ಲಕ್ನೋ ಇಂಡಿಗೋ ವಿಮಾನ, ಅಯೋಧ್ಯೆ-ಬೆಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್, ದರ್ಭಾಂಗಾದಿಂದ ಮುಂಬೈಗೆ ಸ್ಪೈಸ್‌ಜೆಟ್ ವಿಮಾನ (SG116), ಬಾಗ್ಡೋಗ್ರಾ-ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್ ವಿಮಾನ (QP 1373) ಅಲಯನ್ಸ್ ಏರ್ ಅಮೃತಸರ-ಡೆಹ್ರಾಡೂನ್-ದೆಹಲಿ ವಿಮಾನ (9I 650) ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (IX 684) ಹಾಗೂ ಮಧುರೈನಿಂದ ಸಿಂಗಾಪುರಕ್ಕೆ ಹೊರಟಿದ್ದ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದೆ.
ತುರ್ತು ಸಭೆ:
ವಿಮಾನಗಳಿಗೆ ಬಾಂಬ್ ಬೆದರಿಕೆ ವಿಚಾರವಾಗಿ ಬುಧವಾರ ಬೆಳಗ್ಗೆ 11 ಗಂಟೆಗೆ ಸಂಸದೀಯ ಸ್ಥಾಯಿ ಸಮಿತಿ ಸಭೆ ಸೇರಿತ್ತು. ಇದಕ್ಕೂ ಮುನ್ನ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಇದನ್ನೂ ಓದಿ: ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಹರಿಯಾಣ, ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಛೀಮಾರಿ
ಡಾರ್ಕ್‌ವೆಬ್ ಮೇಲೆ ನಿಗಾ:
ಬಾಂಬ್ ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಗುರುತಿಸಲಾಗಿದ್ದು, ಡಾರ್ಕ್ ವೆಬ್‌ನ ಮೇಲೆ ನಿಗಾ ಇಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.