ಲಕ್ನೋ: ದೆಹಲಿಯಿಂದ (Delhi) ಬಾಗ್ಡೋಗ್ರಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದ (IndiGo Flight) ಶೌಚಾಲಯದಲ್ಲಿ ಟಿಶ್ಯೂ ಪೇಪರ್ ಮೇಲೆ ಬರೆದ ಬಾಂಬ್ ಬೆದರಿಕೆ ಪತ್ರ (Bomb Threat) ಸಿಕ್ಕಿದ್ದು, ವಿಮಾನವನ್ನು ಲಕ್ನೋದಲ್ಲಿ (Lucknow) ತುರ್ತು ಭೂಸ್ಪರ್ಶ ಮಾಡಲಾಗಿದೆ.
ಇಂಡಿಗೋ ವಿಮಾನ 6E 6650 ಬಾಗ್ಡೋಗ್ರಾಗೆ ತೆರಳುತ್ತಿತ್ತು. ಹಾರಾಟದಲ್ಲಿದ್ದಾಗ, ವಿಮಾನದ ಟಿಶ್ಯೂ ಪೇಪರ್ ಮೇಲೆ ಬಾಂಬ್ ಇದೆ ಎಂದು ಬರೆದಿರುವುದು ಪತ್ತೆಯಾಗಿದೆ. ಕೂಡಲೇ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ಮನವಿ ಮಾಡಿಕೊಂಡು, ತುರ್ತು ಭೂಸ್ಪರ್ಶ ಮಾಡಲಾಯಿತು. ಬೆಳಿಗ್ಗೆ 8:46 ರ ಸುಮಾರಿಗೆ, ಇಂಡಿಗೋ ಏರ್‌ಲೈನ್ಸ್ ವಿಮಾನ 6E-6650 (ದೆಹಲಿ-ಬಾಗ್ಡೋಗ್ರಾ) ನಲ್ಲಿ ಬಾಂಬ್ ಇದೆ ಎಂದು ಎಟಿಸಿಯಿಂದ ಸಂದೇಶ ಕಳುಹಿಸಿತ್ತು. ವಿಮಾನವು ಬೆಳಿಗ್ಗೆ 9:17ಕ್ಕೆ ಸುರಕ್ಷಿತವಾಗಿ ಇಳಿಯಿತು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಭದ್ರತಾ ತಪಾಸಣೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಮದೀನಾ, ಹೈದರಾಬಾದ್ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ – ಅಹಮದಾಬಾದ್‌ನಲ್ಲಿ ತುರ್ತು ಭೂಸ್ಪರ್ಶ
ನಮ್ಮ ಗ್ರಾಹಕರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅವರಿಗೆ ಉಪಾಹಾರ ನೀಡಲಾಗಿದೆ. ನಮ್ಮ ಗ್ರಾಹಕರು, ಸಿಬ್ಬಂದಿ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ವಿಮಾನ ಯಾನ ಸಂಸ್ಥೆ ಹೇಳಿಕೊಂಡಿದೆ.
ವಿಮಾನವು 222 ವಯಸ್ಕರು ಮತ್ತು 8 ಶಿಶುಗಳು, ಇಬ್ಬರು ಪೈಲಟ್ ಮತ್ತು 5 ಸಿಬ್ಬಂದಿ ಸೇರಿದಂತೆ 230 ಮಂದಿ ಇದ್ದರು. ವಿಮಾನ ಲಕ್ನೋ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಭದ್ರತಾ ಸಿಬ್ಬಂದಿ ವಿಮಾನವನ್ನು ಸುತ್ತುವರೆದರು. ಬಳಿಕ ಐಸೋಲೇಷನ್ ಬೇಯಲ್ಲಿ ವಿಮಾನ ನಿಲ್ಲಿಸಲಾಯಿತು. ಬಾಂಬ್ ನಿಷ್ಕ್ರಿಯ ದಳ ಮತ್ತು ಸಿಐಎಸ್‌ಎಫ್ ಸಿಬ್ಬಂದಿ ಶೋಧ ನಡೆಸಿದ್ದಾರೆ. ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು.

