ಬಾಲಿವುಡ್‌ನ ಹೀ ಮ್ಯಾನ್, ಎವರ್‌ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಅಂತಲೇ ಜನಪ್ರಿಯರಾಗಿರುವ ಹಿರಿಯ ನಟ ಧರ್ಮೇಂದ್ರ (Actor Dharmendra) (89) ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಧರ್ಮೇಂದ್ರ ಅವರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು (ನ.10) ಬೆಳಿಗ್ಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಗತವೈಭವ ಸೃಷ್ಟಿಸಲು ಹೊರಟ ಸಿಂಪಲ್ ಸುನಿಗೆ ಕಿಚ್ಚ ಸಾಥ್
ಇದೇ ಡಿಸೆಂಬರ್ 8ರಂದು 90ನೇ ವಸಂತಕ್ಕೆ ಕಾಲಿಡಲಿರುವ ನಟ ಧರ್ಮೇಂದ್ರ ಅವರನ್ನು ಕಳೆದ ವಾರವಷ್ಟೇ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಲ್ಲದೇ ಏಪ್ರಿಲ್‌ನಲ್ಲಿ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ಆರು ದಶಕಗಳ ವೃತ್ತಿಜೀವನದಲ್ಲಿ ಧರ್ಮೇಂದ್ರ ಅವರು ಹಿಂದಿ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. 1960ರಲ್ಲಿ ʻದಿಲ್ ಭೀ ತೇರಾ ಹಮ್ ಭೀ ತೇರೆʼ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಪ್ರಾರಂಭವಾಗಿ ಬಂದಿನಿ , ಅನುಪಮಾ, ಶೋಲೆ, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್ ಮತ್ತು ಡ್ರೀಮ್ ಗರ್ಲ್ ಸೇರಿದಂತೆ ಹಲವುಗಳಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
2025ರ ಆರಂಭದಲ್ಲಿ ಧರ್ಮೇಂದ್ರ ಅವರು ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟನೆಯ ʻತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾʼ ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಇನ್ನೂ ಡಿಸೆಂಬರ್ 25ರಂದು ತೆರೆಕಾಣಲಿರುವ ʻಇಕ್ಕಿಸ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇದನ್ನೂ ಓದಿ: ರೀಲ್ಸ್ ಮಾಡುತ್ತಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ರಜಿನಿ

