ಬಾಲಿವುಡ್ ಕಂಡ ಮೋಸ್ಟ್ ಕಾಂಟ್ರವರ್ಸಲ್ ಕ್ವೀನ್ ಕಂಗನಾ. ಬಿಟೌನ್ ಆಳುತ್ತಿರುವ ಖಾನ್ ಖಾಂದಾನವನ್ನೇ ಎದುರು ಹಾಕಿಕೊಂಡ ಗಟ್ಟಿಗಿತ್ತಿ. ಸಿನಿಮಾ ರಂಗದ ನೆಪೋಟಿಸಂ ಬಗ್ಗೆ ಬಗೆದು ಬಗೆದು ಬಡಿದಾಕಿದ ಬಜಾರಿ. ಪ್ರೀತಿ, ಪ್ರೇಮ, ಡೇಟಿಂಗ್, ಬ್ರೇಕ್‌ಅಪ್, ರಿಲೇಷನ್‌ಶಿಪ್. ಖಾಸಗಿ ಸಂಗತಿ ಏನೇ ಇರಲಿ ಖುಲ್ಲಂ ಖುಲ್ಲಾ ಮಾತಾಡಿ ಧಕ್ಕಿಸಿಕೊಂಡ ಲೇಡಿ ಸೂಪರ್ ಸ್ಟಾರ್. ಫಿಲ್ಟರ್ ಇಲ್ಲದ ಮಾತು, ಕೆಟ್ಟ ಧೈರ್ಯ, ಹುಂಬುತನವೇ ಈಕೆಗಿರುವ ಪ್ಲಸ್ ಪಾಯಿಂಟ್. ಒಂದಿಲ್ಲೊಂದು ವಿವಾದದ ಮೂಲಕ ಸದಾ ಸುದ್ದಿ ಆಗ್ತಿದ್ದ ಈ ನಟಿ, ಈಗ ಸಂಸದೆ. ಭರ್ಜರಿ ಗೆಲುವು ಸಾಧಿಸಿ ಸಂಸತ್‌ಗೆ ಹೊರಟಿರೋ ಈಕೆ ಬೇರೆ ಯಾರೂ ಅಲ್ಲ. ಬಾಲಿವುಡ್ ಕ್ವೀನ್ ಕಂಗನಾ ರಣಾವತ್. ಹೌದು, ಕಂಗನಾ (Kangana Ranaut) ಗೆದ್ದಾಗಿದೆ. ಸಂಸತ್ ಪ್ರವೇಶಿಸಲು ಹೊಸ ಸೀರೆ ಖರೀದಿಸಿಯೂ ಆಗಿದೆ. ಆದರೆ, ಈ ಗೆಲುವು ಬಾಲಿವುಡ್‌ಗೆ ಸಹಿಸೋಕೆ ಆಗ್ತಿಲ್ಲ. ಕಾರಣ? ನೂರಾರು. ಆ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ.

ನಾನು ಗೆಲ್ಲೋಕಾಗಿ ಹುಟ್ಟಿದೋಳು ತಾಯಿಯ ಮುಂದೆ ಇಂಥದ್ದೊಂದು ಮಾತು ಹೇಳಿದಾಗ ಕಂಗನಾಗೆ ಕೇವಲ 15ರ ವಯಸ್ಸು. ಅಮ್ಮನ ಮಡಿಲಲ್ಲಿ ಹಾಯಾಗಿದ್ದ ಮಗಳು. ಇಂಥದ್ದೊಂದು ಮಾತು ಆಡಿದಾಗ ಅಕ್ಷರಶಃ ಕಂಗಾಲಾಗಿದ್ದರು ಕಂಗನಾ ತಾಯಿ ಆಶಾ. ಶಾಲಾ ಶಿಕ್ಷಕಿಯಾಗಿದ್ದ ಆಶಾ, ಎಲ್ಲ ಮಕ್ಕಳನ್ನು ಅರ್ಥ ಮಾಡ್ಕೊಂಡಿದ್ರು. ಆದರೆ, ಮಗಳನ್ನೇ ಅರ್ಥ ಮಾಡಿಕೊಳ್ಳೊದ್ರಲ್ಲಿ ಸೋತಿದ್ದರು. ಇದರ ಪರಿಣಾಮ, 15ನೇ ವಯಸ್ಸಿಗೆ ಮನೆ ಬಿಟ್ಟು ಹೊರಟು ಬಿಟ್ಟಿದ್ದಳು ಮಗಳು ಕಂಗನಾ. ಎದೆಯುದ್ದ ಬೆಳೆದ ಮಗಳು ಹಾಗೆ ಊರಬಿಟ್ಟ ಸುದ್ದಿ ಅಪ್ಪ ಅಮ್ಮನಿಗೆ ಆಘಾತ ತಂದಿತ್ತು. ಆದರೆ, ಕಂಗನಾ ಹೇಳಿದ ಮಾತು ಅಮ್ಮನಲ್ಲಿ ಭರವಸೆ ಮೂಡಿಸಿತ್ತು. ಅಷ್ಟಕ್ಕೂ ಕಂಗನಾ ಊರು ಬಿಟ್ಟಿದ್ದು ಯಾಕೆ ಗೊತ್ತಾ? ಅದೇ ಬಣ್ಣದ ಚಾಳಿ.
ನಟಿಯಾಗಬೇಕು ಅನ್ನೋದು ಕಂಗನಾ ಕನಸು. ಚಿಕ್ಕವಯಸ್ಸಿನಿಂದಲೂ ಇದೊಂದೇ ಕನಸು ಕಂಡಿದ್ದಳು ಈ ಹುಡುಗಿ. ಆದರೆ, ಈಕೆ ನಟಿಯಾಗೋದು ಅಪ್ಪ ಅಮ್ಮನಿಗೆ ಬಿಲ್‌ಖುಲ್ ಇಷ್ಟವಿರಲಿಲ್ಲ. ಮನೆಯವರ ವಿರೋಧ ಕಟ್ಟಿಕೊಂಡು ಮುಂಬೈ ಟ್ರೈನ್ ಹತ್ತೇಬಿಟ್ಟಿದ್ದಳು ಕಂಗನಾ. ಮುಂಬೈ ಏನು ಸಣ್ಣ ಊರಾ? ನೆಂಟರಿಲ್ಲದ ಊರಿಗೆ ಬಂದವಳು ಅಕ್ಷರಶಃ ಕೇರ್ ಆಫ್ ಫುಟ್‌ಪಾತ್ ಆದಳು. ಸಣ್ಣಪುಟ್ಟ ಕೆಲಸ ಫ್ಲಾಟ್‌ಫಾರಂನಲ್ಲಿ ನಿದ್ದೆ ಹೀಗೆ ಅವಕಾಶಕ್ಕಾಗಿ ಅಲೆದಾಟ. ಇವಳು ಮುಂಬೈಗೆ ಬಂದ ಹೊಸತರದಲ್ಲಿ ಕಂಗನಾ ದಿನಚರಿಯಾಗಿತ್ತು. ಆದರೂ, ನಟಿಯಾಗಬೇಕು ಎನ್ನುವ ಹಠ ಮಾತ್ರ ಎಳ್ಳಷ್ಟು ಕಡಿಮೆ ಆಗಲಿಲ್ಲ. ಮತ್ತೆ ಮತ್ತೆ ಪಯತ್ನಿಸುತ್ತಲೇ ಇದ್ದರು. ಅದೊಂದು ದಿನ ಗ್ಯಾಂಗ್‌ಸ್ಟರ್ ಕಣ್ಣಿಗೆ ಬಿದ್ದರು. ಅಲ್ಲಿಂದ ಕಂಗನಾ ಬದುಕು ಬದಲಾಯಿತು.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಾಂಬಿಯಾ ಪಟ್ಟಣದಿಂದ ಮುಂಬೈಗೆ ಬಂದಿದ್ದ ಕಂಗನಾ ಅವಕಾಶಕ್ಕಾಗಿ ಪಡಬಾರದ ಕಷ್ಟ ಪಟ್ಟಳು. ಫೋಟೋ ಹಿಡಿದುಕೊಂಡು ನಿರ್ದೇಶಕರ ಮನೆ ಮುಂದೆ ನಿಂತಳು, ನಿರ್ಮಾಪಕರ ಆಫೀಸಿಗೆ ಅಲೆದಳು. ಶೂಟಿಂಗ್ ನಡೆಯೋ ಸ್ಥಳಕ್ಕೂ ಹೋಗಿ ಅವಕಾಶಕ್ಕೆ ಅಂಗಲಾಚಿದಳು. ಅದೊಂದು ದಿನ ಅನುರಾಗ ಬಸು ಅವರ ಕಣ್ಣೀಗೆ ಬಿದ್ದು ‘ಗ್ಯಾಂಗ್‌ಸ್ಟರ್’ (Gangster) ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆದರು. ಅಲ್ಲಿಂದ ಹಿಂದೆ ತಿರುಗಿ ನೋಡಲೇ ಇಲ್ಲ ಕಂಗನಾ, ಒಂದರ ಮೇಲೊಂದು ಸಿನಿಮಾ ಮಾಡುತ್ತಲೇ ಹೋದಳು. ಸದ್ಯ ಕಂಗನಾ ಕೇವಲ ನಟಿಯಾಗಿ ಉಳಿದುಕೊಂಡಿಲ್ಲ, ನಿರ್ದೇಶಕಿ ಹಾಗೂ ನಿರ್ಮಾಪಕಿಯೂ ಆಗಿದ್ದಾರೆ.
ಸದ್ಯ ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಕಂಗನಾ. ಅಷ್ಟೂ ಚಿತ್ರಗಳಲ್ಲೂ ವಿಭಿನ್ನ ಪಾತ್ರಗಳನ್ನೇ ಮಾಡಿ, ಗೆದ್ದಿದ್ದಾರೆ. ಹಳ್ಳಿ ಹುಡುಗಿಯಿಂದ ಹಿಡಿದು ಸಖತ್ ಗ್ಲಾಮರ್ ಪಾತ್ರಗಳನ್ನೂ ಕಂಗನಾ ನಿಭಾಯಿಸಿದ್ದಾರೆ. ನೋಡುಗರಿಂದ ಭೇಷ್ ಎನಿಸಿಕೊಂಡಿದ್ದಾರೆ. ನಟನೆಗಾಗಿಯೇ ಮೂರು ಬಾರಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಸಿನಿಮಾ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಕೂಡ ಇವರಿಗೆ ದೊರೆತಿದೆ. ಇಷ್ಟೊಂದು ಗೌರವವನ್ನು ಪಡೆದ ಕಂಗನಾ, ಸಾಕಷ್ಟು ಬಾರಿ ವಿವಾದಕ್ಕೀಡಾಗಿದ್ದಾರೆ. ಸಿನಿಮಾ ರಂಗದ ಹೊರತಾಗಿಯೂ ನಾನಾ ವಿಚಾರಗಳಿಗಾಗಿ ಕಂಗನಾ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಬಾಲಿವುಡ್ ಅನ್ನು ಆಳ್ತಿರೋ ಖಾನ್‌ಗಳ ವಿರುದ್ಧ ತೊಡೆ ತಟ್ಟಿದ ಮೊದಲ ನಾಯಕಿ ಎನ್ನುವ ಹೆಗ್ಗಳಿಕೆಯೂ ಕಂಗನಾರದ್ದು. ಅಷ್ಟೇ ಅಲ್ಲ, ನೆಪೋಟಿಸಂ ಬಗ್ಗೆಯೂ ಜೋರಾಗಿ ಧ್ವನಿ ಎತ್ತಿದರು. ಕರಣ್ ಜೋಹಾರ್ (Karan Johar) ಸೇರಿದಂತೆ ಅನೇಕ ನಿರ್ಮಾಪಕರ ವಿರುದ್ಧ ಮಾತನಾಡಿದರು. ಡೇಟಿಂಗ್ ವಿಚಾರದಲ್ಲಂತೂ ಹೃತಿಕ್ ರೋಷನ್ ಮತ್ತು ಕಂಗನಾ ನಡುವಿನ ಹೋರಾಟ ಸಾಕಷ್ಟು ಸದ್ದು ಮಾಡಿತ್ತು. ಕಂಗನಾ ವಿರುದ್ಧ ಬಾಲಿವುಡ್ ತಿರುಗಿ ಬಿತ್ತು. ಸಾಲು ಸಾಲು ಚಿತ್ರಗಳು ಸೋತವು. ರಾಜಕೀಯ ಪಕ್ಷವೊಂದು ಕಂಗನಾಗೆ ಕೊಡಬಾರದ ಕಷ್ಟ ಕೊಟ್ಟಿತು. ಈ ಎಲ್ಲದಕ್ಕೂ ಉತ್ತರ ಕೊಡಲು ರಾಜಕೀಯ ಕ್ಷೇತ್ರಕ್ಕೆ ಕಂಗನಾ ಬರಬೇಕಾಯ್ತು.
ಹಿಂದುತ್ವ, ನರೇಂದ್ರ ಮೋದಿ (Narendra Modi) ಬಗ್ಗೆ ಸದಾ ಮಾತನಾಡುತ್ತಿದ್ದ ಕಂಗನಾ, ರಾಜಕಾರಣಕ್ಕೆ ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. 2024ರ ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆಯೇ ಇದ್ದಕ್ಕಿದ್ದಂತೆ ಆ್ಯಕ್ಟಿವ್ ಆದರು ಕಂಗನಾ. ಚುನಾವಣೆಗೆ ಸ್ಪರ್ಧಿಸುವ ಸಣ್ಣದೊಂದು ಸುಳಿವು ಕೊಟ್ಟರು. ಕೃಷ್ಣನ ಕೃಪೆ ಇದ್ದರೆ ಖಂಡಿತಾ ಅಖಾಡಕ್ಕೆ ಇಳೀತಿ ಅನ್ನುವ ಮಾತುಗಳನ್ನೂ ಆಡಿದರು. ಕೊನೆಗೂ ಅದು ನಿಜವಾಯ್ತು. ಬಿಜೆಪಿ ಕಂಗನಾಗೆ ಟಿಕೆಟ್ ನೀಡಿತ್ತು. ಚುನಾವಣೆಗೆ ನಿಂತಾಗ ಬಾಲಿವುಡ್ ಮಾತ್ರವಲ್ಲ, ದೇಶದ ಜನತೆ ಕೂಡ ಕುತೂಹಲದಿಂದ ನೋಡುತ್ತಿತ್ತು. ಗೆಲ್ಲೋಕೆ ಸಾಧ್ಯವಾ ಅಂತ ಗೇಲಿ ಕೂಡ ಮಾಡ್ತು. ಕಂಗನಾ ಗೆಲ್ಲಬಾರದು ಅಂತ ಅಲ್ಲಿಯೂ ಅಪಪ್ರಚಾರ ಮಾಡಲಾಯಿತು. ಗೋ ಮಾಂಸ ತಿಂದ್ರು ಅಂತಾನೂ ಸುಳ್ಳು ಸುದ್ದಿ ಹಬ್ಬಿಸಲಾಯ್ತು. ಏನೇ ತೊಂದರೆ ಕೊಟ್ಟರೂ ಕೊನೆಗೂ ಕಂಗನಾ ಗೆದ್ದು ಬೀಗಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ಗೆದ್ದಿದ್ದಾರೆ. ಮಾಜಿ ಸಿಎಂ ಪುತ್ರನ ವಿರುದ್ಧ ಸ್ಪರ್ಧಿಸಿದವರು 74755 ಮತಗಳ ಅಂತರದಿಂದ ಗೆದ್ದು, 37ನೇ ವಯಸ್ಸಿನಲ್ಲಿ ಸಂಸದೆಯಾಗಿದ್ದಾರೆ. ಈ ಗೆಲುವು ಬಾಲಿವುಡ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಕಂಗನಾ ಗೆದ್ದಿರೋ ಸಂಭ್ರಮ ಬಾಲಿವುಡ್‌ನಲ್ಲಿ ಕಾಣ್ತಿಲ್ಲ. ಚುನಾವಣೆಯಲ್ಲಿ ಗೆದ್ದರೆ ಬಾಲಿವುಡ್ ಬಿಡ್ತೀನಿ ಅಂತ ಕಂಗನಾ ಹೇಳಿದ್ದಾರೆ ನಿಜ. ಆದರೆ, ಅವರು ಒಪ್ಪಿಕೊಂಡ ಹಲವು ಚಿತ್ರಗಳಿವೆ. ಇವುಗಳನ್ನೂ ಅವರು ಕೈ ಬಿಡಬಹುದು. ಆದರೆ, ಅವರೇ ನಟಿಸಿ, ನಿರ್ದೇಶನ ಮಾಡಿ, ನಿರ್ಮಾಣವನ್ನೂ ಮಾಡಿರೋ ಚಿತ್ರವೊಂದು ಬಿಡುಗಡೆಗೆ ರೆಡಿ ಇದೆ. ಇಂದಿರಾ ಗಾಂಧಿ ಅವರ ತುರ್ತು ಪರಿಸ್ಥಿತಿ ಕುರಿತಾದ `ಎಮರ್ಜನ್ಸಿ’ ಚಿತ್ರದಲ್ಲಿ ಕಂಗನಾ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಮಾಡೋದು ನಿಜಕ್ಕೂ ಸವಾಲಾಗಬಹುದು. ಈ ಸವಾಲನ್ನು ಅವರು ಹೇಗೆ ದಾಟಿಕೊಳ್ತಾರೆ ಅನ್ನೋದು ಸದ್ಯಕ್ಕಿರೋ ಕುತೂಹಲ.







