ನವದೆಹಲಿ: ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಆರಂಭಿಸಿದ ಬಳಿಕ ತನಗೆ ಬಾಲಿವುಡ್ ನಲ್ಲಿ ಯಾವುದೇ ಸಿನಿಮಾ ಆಫರ್ ಬಂದಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.
ಖಾಸಗಿ ಮಾಧ್ಯಮವೊಂದರ ಸಂದರ್ಶನದ ವೇಳೆಯಲ್ಲಿ ಈ ಕುರಿತು ಮಾತನಾಡಿದ ರೈ, ಕಳೆದ ಆಕ್ಟೋಬರ್ ತಿಂಗಳಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸಂಭ್ರಮಿಸುತ್ತಿದ್ದ ಬಿಜೆಪಿ ಕಾರ್ಯಯರ್ತರ ವಿರುದ್ಧ ಪ್ರಧಾನಿ ಮೋದಿ ಅವರ ಮೌನವನ್ನು ಪ್ರಶ್ನಿಸಿದ್ದೆ. ಬಳಿಕ ಹಿಂದಿ ಚಿತ್ರೋದ್ಯಮ ತನ್ನನ್ನು ಸೈಡ್ ಲೈನ್ ಮಾಡಿದೆ ಎಂದು ಹೇಳಿದರು.
ಸದ್ಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ಪ್ರಚಾರ ನಡೆಸುತ್ತಿರುವ ಪ್ರಕಾಶ್ ರೈ, ತನಗೆ ದಕ್ಷಿಣ ಚಿತ್ರ ರಂಗದಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಬಾಲಿವುಡ್ ಈ ನಡೆಯಿಂದ ತನಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಏಕೆಂದರೆ ತನ್ನ ಬಳಿ ಸಾಕಷ್ಟು ಹಣ ಇದೆ ಎಂದು ತಿಳಿಸಿದ್ದಾರೆ.
ಗೌರಿ ಲಂಕೇಶ್ ಅವರ ಹತ್ಯೆ ತನಗೆ ತುಂಬಾ ಗೊಂದಲ ಉಂಟು ಮಾಡಿತು. ಆಕೆ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಆದರೆ ಆಕೆಯ ಹತ್ಯೆ ಬಳಿಕ ನಿಶಬ್ಧ ಮೂಡಿತ್ತು. ಬಳಿಕ ತಾನು ಪ್ರಶ್ನೆ ಮಾಡಲು ಆರಂಭಸಿದೆ. ತಾನು ಮಾಡುವ ಕಾರ್ಯವನ್ನು ಬಿಜೆಪಿ ತಡೆಯಲು ಮುಂದಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ಮಾಡಿರುವ ಪ್ರಕಾಶ್ ರೈ, ದೇಶಕ್ಕೆ ಅಮಿತ್ ಶಾ ಅವರ ಕೊಡುಗೆ ಏನು? ನಾಯಕರಾಗಿ ಅವರ ಸಾಧನೆ ಏನು? ದೇಶದ ಅಭಿವೃದ್ಧಿ ಬಗ್ಗೆ ಅವರು ಯಾವ ಯೋಜನೆಗಳನ್ನು ರೂಪಿಸಿದ್ದಾರೆ. ಯಾವ ಆಧಾರದ ಮೇಲೆ ಅವರನ್ನು ಚಾಣಕ್ಯ ಎಂದು ಕರೆಯಲಾಗುತ್ತದೆ ಅಂತಾ ಪ್ರಶ್ನಿಸಿದರು.