– ಬಿಗ್‍ಬಿ ಜೊತೆ ಬ್ರಹ್ಮಾಸ್ತ್ರ ಚಿತ್ರೀಕರಣ!
ಮುಂಬೈ: ಇತ್ತೀಚೆಗೆ ತೆರೆ ಕಂಡಿದ್ದ ರಾಜಿ ಚಿತ್ರ ಬಾಕ್ಸಾಫೀಸ್‍ನಲ್ಲಿಯೂ ನಿರ್ಣಾಯಕ ದಾಖಲೆ ಮಾಡಿದೆ. ಅದೇ ರೀತಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಆಲಿಯಾ ಭಟ್ ನಟನೆಗೂ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆಗಳೂ ಹರಿದು ಬರುತ್ತಿವೆ. ಈ ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿರುವ ಆಲಿಯಾ ಇದೀಗ ಮತ್ತಷ್ಟು ಸಂತಸಗೊಂಡಿದ್ದಾಳೆ. ಅದಕ್ಕೆ ಕಾರಣವಾಗಿರೋದು ಬಿಗ್‍ಬಿ ಅಮಿತಾಭ್ ಬಚ್ಚನ್ ಜೊತೆ ನಟಿಸಲು ಸಿಕ್ಕಿರುವ ಅವಕಾಶ.
ಕರಣ್ ಜೋಹರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರೋ ಬ್ರಹ್ಮಾಸ್ತ್ರ ಚಿತ್ರದಲ್ಲಿ ಆಲಿಯಾ ಭಟ್ ನಟಿಸುತ್ತಿದ್ದಾರೆಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಆದರೆ ಈ ಚಿತ್ರದ ಚಿತ್ರೀಕರಣಕ್ಕೆ ಸದ್ದಿಲ್ಲದೆಯೇ ಚಾಲನೆ ಸಿಕ್ಕಿತ್ತು. ರಾಜಿ ಚಿತ್ರದ ಪ್ರಮೋಷನ್ ಕೆಲಸದ ಜೊತೆ ಜೊತೆಗೇ ಆಲಿಯಾ `ಬ್ರಹ್ಮಾಸ್ತ್ರ’ ಚಿತ್ರದ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದರು.
ರಾಜಿ ಚಿತ್ರ ಮುಕ್ತಾಯದ ಹಂತ ತಲುಪೋ ಹೊತ್ತಿಗೆಲ್ಲಾ ಆಲಿಯಾ ಬ್ರಹ್ಮಸ್ತ್ರ ಚಿತ್ರ ತಂಡದ ಜೊತೆ ಸೇರಿಕೊಂಡಿದ್ದರು. ಈಗೊಂದು ವಾರದ ಹಿಂದೆಯೇ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ವಿದೇಶಗಳಲ್ಲಿ ನೆರವೇರಿದೆ. ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೆ ಭಾರತದಲ್ಲಿಯೇ ಚಾಲನೆ ಸಿಕ್ಕಿ ಆಲಿಯಾ, ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆಗಿನ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅಮಿತಾಭ್ ಜೊತೆ ನಟಿಸೋ ಅವಕಾಶ ಸಿಕ್ಕಿದ್ದರ ಬಗ್ಗೆ ಆಲಿಯಾ ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಹಂಚಿಕೊಂಡಿದ್ದಾರೆ.
ಸೆಟ್‍ನಲ್ಲಿ ಅಮಿತಾಭ್ ರನ್ನು ಆಲಿಯಾ ಪ್ರೀತಿಯಿಂದ ಎಬಿ ಅಂತಲೇ ಸಂಬೋಧಿಸುತ್ತಾರಂತೆ. ಆಲಿಯಾರ ನಟನೆ ನೋಡಿ ಅಮಿತಾಭ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರಂತೆ. ಆಲಿಯಾ ಈ ಹಿಂದೆಯೂ ಸಾಕಷ್ಟು ಸಲ ತಾನು ಅಮಿತಾಭ್ ಜೊತೆ ನಟಿಸ ಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ಇದೀಗ ಬ್ರಹ್ಮಾಸ್ತ್ರ ಮೂಲಕ ಅದು ಸಾಕಾರಗೊಂಡ ಖುಷಿ ಆಲಿಯಾ ಅವರದ್ದಾಗಿದೆ.