ಮುಂಬೈ: ಸ್ಯಾಂಡಲ್‍ವುಡ್ ಮಾತ್ರವಲ್ಲ ಭಾರತೀಯ ಚಿತ್ರರಂಗಲ್ಲೇ ಭಾರೀ ಕುತೂಹಲ ಮೂಡಿಸಿರುವ ಕೆಜಿಎಫ್-2 ಸಿನಿಮಾ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಕೊನೆಯ ಹಂತದ ಚಿತ್ರೀಕರಣ ಮಾತ್ರ ಬಾಕಿ ಇದೆ ಎನ್ನಲಾಗಿದೆ. ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಈಗಾಗಲೇ ಘೋಷಿಸಿರುವುದು ತಿಳಿದೇ ಇದೆ. ಆದರೆ ನಟ ನಟಿಯರು ತಮ್ಮದೇಯಾದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
Advertisement
ಚಿತ್ರದಲ್ಲಿ ಬಹುತಾರಾಗಣವಿದ್ದು, ಬಾಲಿವುಡ್‍ನ ಸಂಜಯ್ ದತ್, ರವೀನಾ ಟಂಡನ್ ಸಹ ನಟಿಸಿದ್ದಾರೆ ಎಂಬುದು ತಿಳಿದಿರುವ ವಿಚಾರ. ಎಲ್ಲರೂ ಅವರವರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ನಾಯಕ ನಟ ಯಶ್ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದು, ಇತ್ತ ನಿರ್ದೇಶಕ ಪ್ರಶಾಂತ್ ನೀಲ್ ಸಹ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಆದರೆ ಚಿತ್ರದಲ್ಲಿ ಅಧೀರನ ಪಾತ್ರ ನಿರ್ವಹಿಸುತ್ತಿರುವ ಸಂಜಯ್ ದತ್ ಮಾತ್ರ ವರ್ಕೌಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. 60ರ ಇಳಿ ವಯಸ್ಸಿನಲ್ಲಿಯೂ ಆಕ್ಟಿವ್ ಆಗಿರುವ ಅವರು ವರ್ಕೌಟ್ ಮಾಡುತ್ತಲೇ ಇರುತ್ತಾರೆ. ಚಿತ್ರಕ್ಕಾಗಿ ಇನ್ನೂ ಹೆಚ್ಚಿನ ವರ್ಕೌಟ್ ಮಾಡುತ್ತಾರೆ.
Advertisement
Advertisement
ಕೆಜಿಎಫ್-2 ಚಿತ್ರದಲ್ಲಿ ಸಂಜಯ್ ದತ್ ಅವರದ್ದು ಕೊನೆಯ ಹಂತದ ಚಿತ್ರೀಕರಣವಿದ್ದು, ಇದಕ್ಕಾಗಿ ಸಂಜಯ್ ದತ್ ಅವರು ಲಾಕ್‍ಡೌನ್ ಸಮಯದಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಈ ಮೂಲಕ ಲಾಕ್‍ಡೌನ್ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಕೊರೊನಾ ವೈರಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಸಂಜಯ್ ಹಾಕಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.
Advertisement
ಕೆಜಿಎಫ್ ಚಾಪ್ಟರ್-1 ನಂತರ ಚಾಪ್ಟರ್-2 ತೀವ್ರ ಕುತೂಹಲ ಕೆರಳಿಸಿದ್ದು, ಚಿತ್ರ ತಂಡ ಸಹ ಅಷ್ಟೇ ಆಸಕ್ತಿ ವಹಿಸಿ ಚಿತ್ರೀಕರಣ ಮಾಡಿದೆ. ಭಾರೀ ನಿರೀಕ್ಷೆಯಲ್ಲಿರುವ ಪ್ರೇಕ್ಷಕರಿಗೆ ಅವರ ನಿರೀಕ್ಷೆಗೂ ಮೀರಿ ಚಿತ್ರವನ್ನು ನೀಡಲು ತಂಡ ಮುಂದಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ಫೈನಲ್ ಹಂತ ತಲುಪಿದೆ. ಕೊನೆಯ ಭಾಗದಲ್ಲಿ ಯಶ್ ಹಾಗೂ ಸಂಜಯ್ ದತ್ ಅವರ ಕಾಳಗದ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಿತ್ರ ಅಕ್ಟೋಬರ್ 23ರಂದು ತೆರೆಗೆ ಬರಲಿದೆ ಎಂದು ಈಗಾಗಲೇ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಬಹಿರಂಗಪಡಿಸಿದೆ. ದಿನಾಂಕ ತಿಳಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದು, ಚಿತ್ರ ವೀಕ್ಷಣೆಗೆ ಬೆರಗುಗಣ್ಣಿನಿಂದ ಕಾಯುತ್ತಿದ್ದಾರೆ.