ಬಾಲಿವುಡ್ ಸಿನಿಮಾ ರಂಗದ ಹಿರಿಯ ಕಲಾವಿದೆ ಹಾಗೂ ನಟ ನಾಸೀರುದ್ದೀನ್ ಶಾ (Naseeruddin Shah) ಪತ್ನಿ ರತ್ನಾ ಪಠಾಕ್ ಶಾ (Ratna Pathak Shah) ‘ಆರ್.ಆರ್.ಆರ್’ (RRR) ಸಿನಿಮಾ ಬಗ್ಗೆ ಕಟು ಟೀಕೆ ಮಾಡಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿ ಆಗಿದ್ದ ಅವರು ‘ಆರ್.ಆರ್.ಆರ್ ರೀತಿಯ ಸಿನಿಮಾಗಳು ನಮ್ಮನ್ನು ಮತ್ತಷ್ಟು ಹಿಂದಕ್ಕೆ ಕರೆದುಕೊಂಡು ಹೋಗುತ್ತವೆ. ನಾವೆಲ್ಲರೂ ಮುಂದೆ ನೋಡುತ್ತಿರುವಾಗ, ನಮ್ಮನ್ನು ಈ ಚಿತ್ರ ಹಿಂದಕ್ಕೆ ಕರೆದುಕೊಂಡು ಹೋಗುತ್ತಿದೆ’ ಎಂದು ಹೇಳಿದ್ದಾರೆ. ಸಿನಿಮಾ ಗೆದ್ದಿದ್ದರೂ, ಅದು ಅಹಂಕಾರವನ್ನು ತೋರಿಸುತ್ತದೆ’ ಎಂದಿದ್ದಾರೆ.
ಆರ್.ಆರ್.ಆರ್ ಸಿನಿಮಾದ ಕಥೆಯ ಕುರಿತು ಈ ರೀತಿಯ ಹೇಳಿಕೆಯನ್ನು ನೀಡಿರುವ ಅವರು, ಚಿತ್ರಕರ್ಮಿಗಳು ಈ ಸಿನಿಮಾವನ್ನು ವಿಮರ್ಶೆ ದೃಷ್ಟಿಯಿಂದ ನೋಡಲೇ ಇಲ್ಲವೆಂದು ವಿಷಾದವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಈ ರೀತಿಯ ಸಿನಿಮಾಗಳನ್ನು ವಿಮರ್ಶೆ ಮಾಡದೇ ಇದ್ದರೆ, ಅಹಂಕಾರ ಹೊತ್ತುಕೊಂಡಿರುವ ಅವರು ತಾವು ಮಾಡಿದ್ದೇ ಶ್ರೇಷ್ಠವೆಂದು ಭಾವಿಸುತ್ತಾರೆ ಎಂದು ನಿರ್ದೇಶಕ ರಾಜಮೌಳಿಯನ್ನು (Rajamouli) ಕುಟುಕಿದ್ದಾರೆ. ವಿಮರ್ಶೆಗಳು ಏನೇ ಬಂದರೂ, ಅದನ್ನು ಮುಕ್ತವಾಗಿ ತಗೆದುಕೊಳ್ಳಬೇಕು ಎಂದು ಸಲಹೆಯನ್ನೂ ನೀಡಿದ್ದಾರೆ.
ಸಿನಿಮಾ ಬಗ್ಗೆ ಏನೇ ಟೀಕೆ ಟಿಪ್ಪಣಿಗಳು ಬಂದರೂ, ಈ ವರ್ಷ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ ‘ಆರ್.ಆರ್.ಆರ್’ ಸಿನಿಮಾಗೆ ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆನ್ಯುವಲ್ ಅವಾರ್ಡ್’ನಲ್ಲಿ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮೊನ್ನೆಯಷ್ಟೇ ಈ ಸಿನಿಮಾ ನಾಮನಿರ್ದೇಶನಕ್ಕೆ ಆಯ್ಕೆಯಾಗಿದ್ದನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದೀಗ ಮೂರು ಪ್ರಶಸ್ತಿಗಳನ್ನು ಅದು ಪಡೆದುಕೊಂಡಿದೆ. ಈ ವಿಷಯವನ್ನು ಸ್ವತಃ ಚಿತ್ರತಂಡವೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.
ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆನ್ಯುವಲ್ ಅವಾರ್ಡ್ ಸಂಸ್ಥೆಯು ಆರ್.ಆರ್.ಆರ್ ಸಿನಿಮಾಗೆ ಅತ್ಯುತಮ್ಮ ವಿದೇಶಿ ಸಿನಿಮಾ, ಅತ್ಯುತ್ತಮ ಸಂಗೀತ ಸಂಯೋಜನೆ ಮತ್ತು ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಗಳನ್ನು ನೀಡಿರುವ ಸಂಸ್ಥೆಗೆ ರಾಜಮೌಳಿ ಅಂಡ್ ಟೀಮ್ ಧನ್ಯವಾದಗಳನ್ನು ಅರ್ಪಿಸಿದೆ. ಇದನ್ನೂ ಓದಿ: ನಟಿ ಉರ್ಫಿ ಜಾವೇದ್ ಗೆ ‘ಲಾರಿಂಜೈಟಿಸ್’ ಖಾಯಿಲೆ: ಆಸ್ಪತ್ರೆಗೆ ದಾಖಲು
ಆರ್.ಆರ್.ಆರ್ ಸಿನಿಮಾ ಐದು ವಿಭಾಗಗಳಲ್ಲಿ ನಾಮಿನೇಷನ್ ಪಟ್ಟಿಯಲ್ಲಿತ್ತು. ಅದರಲ್ಲಿ ಮೂರು ಪ್ರಶಸ್ತಿಗಳನ್ನು ಅದು ಬಾಚಿದೆ. ಅಲ್ಲದೇ ಈ ಬಾರಿಯ ಆಸ್ಕರ್ ಪ್ರಶಸ್ತಿಗೂ ಆರ್.ಆರ್.ಆರ್ ಸಿನಿಮಾ ಸ್ಪರ್ಧೆಯಲ್ಲಿದೆ. ಇನ್ನೂ ಅನೇಕ ಪ್ರಶಸ್ತಿಗಳಲ್ಲಿ ಚಿತ್ರ ಸ್ಪರ್ಧೆ ಮಾಡುತ್ತಿದೆ. ಅದರಲ್ಲೂ ಆಸ್ಕರ್ ಮೇಲೆ ಕಣ್ಣಿಟ್ಟು ಚಿತ್ರತಂಡ ಕೂತಿರುವುದರಿಂದ ಆ ಪ್ರಶಸ್ತಿ ಸಿಗುತ್ತಾ ಎನ್ನುವ ಕುತೂಹಲ ಕೂಡ ಮೂಡಿದೆ.