ಮುಂಬೈ: ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಅತ್ಯುತ್ತಮ ನಟರಲ್ಲಿ ಒಬ್ಬರಾದ ಇರ್ಫಾನ್ ಖಾನ್ ಅವರು ತಮ್ಮ 53ನೇ ವಯಸ್ಸಿನಲ್ಲಿ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರನ್ನು ನೆನೆದು ಅಭಿಮಾನಿಗಳು ಕಣ್ಣೀರಾಗಿದ್ದಾರೆ.
ಇರ್ಫಾನ್ ಖಾನ್ ಬಾಲಿವುಡ್‍ನಲ್ಲಿ ಮಹತ್ತರ ಕಾರ್ಯ ಮಾಡಿದ್ದರೂ ಅವರೊಳಗೆ ಒಬ್ಬ ಕ್ರಿಕೆಟಿಗನಿದ್ದ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಇರ್ಫಾನ್ ಖಾನ್ 600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಜಗತ್ತಿನಿಂದ ಹೊರ ಬಂದಿದ್ದ ಕಥೆ ನಿಮಗೆ ಗೊತ್ತಾ?
Advertisement
Advertisement
ಹೌದು.. ಇರ್ಫಾನ್ 20ನೇ ವಯಸ್ಸಿನಲ್ಲಿ ಕ್ರಿಕೆಟಿಗನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದರು. ಅದಕ್ಕೆ ತಕ್ಕಂತೆ ಅಭ್ಯಾಸ ನಡೆಸಿದ್ದ ಅವರು ಸಿಕೆ ನಾಯ್ಡು ಟ್ರೋಫಿಯಲ್ಲಿ ಆಡಲು ಆಯ್ಕೆಯಾಗಿದ್ದರು. ಆದರೆ ಹಣದ ಕೊರತೆಯಿಂದಾಗಿ ಕ್ರಿಕೆಟ್ ಕನಸಿನ ಮನೆಯಿಂದ ಹೊರ ನಡೆದು ಬಂದು ಬಿಟ್ಟರು.
Advertisement
ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇರ್ಫಾನ್ ಖಾನ್, “ನಾನು ಕ್ರಿಕೆಟ್ ಆಡಿದ್ದೇನೆ, ಕ್ರಿಕೆಟಿಗನಾಗಲು ಬಯಸಿದ್ದೆ. ಜೈಪುರ ತಂಡದಲ್ಲಿ ಕಿರಿಯ ಆಟಗಾರನಾಗಿದ್ದ ನಾನು ಆಲ್‍ರೌಂಡರ್ ಜವಾಬ್ದಾರಿ ನಿರ್ವಹಿಸಿದ್ದೆ. ಕ್ರಿಕೆಟ್‍ನಲ್ಲಿಯೇ ವೃತ್ತಿಜೀವನ ಆರಂಭಿಸಲು ಬಯಸಿದ್ದೆ. ಆದರೆ ಸಿ.ಕೆ.ನಾಯ್ಡು ಟೂರ್ನಿಗೆ ಆಯ್ಕೆಯಾದಾಗ 600 ರೂ. ಶುಲ್ಕ ಪಾವತಿಸಲು ನನ್ನ ಬಳಿ ಹಣವಿರಲಿಲ್ಲ. ಆಗ ಯಾರನ್ನ ಕೇಳಬೇಕೆಂದು ತಿಳಿದಿರಲಿಲ್ಲ. ಅಂದಿನಿಂದ ಕ್ರಿಕೆಟ್ ಮನೆಯಿಂದ ಹೊರ ಬಂದುಬಿಟ್ಟೆ” ಎಂದು ಹೇಳಿದ್ದರು.
Advertisement
ನಂತರದ ದಿನಗಳಲ್ಲಿ ಇರ್ಫಾನ್ ಪ್ರತಿಷ್ಠಿತ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‍ಎಸ್‍ಡಿ)ದಲ್ಲಿ ಪ್ರವೇಶ ಪಡೆದರು. ಅದಕ್ಕಾಗಿ ಅವರಿಗೆ 300 ರೂ. ಅಗತ್ಯವಿತ್ತು. ಅವರ ಬಳಿ ಅಷ್ಟು ಹಣವಿಲ್ಲದಿದ್ದಾಗ ಸಹೋದರಿಯೇ ಹಣದ ವ್ಯವಸ್ಥೆ ಮಾಡಿದ್ದರು. 1994-98ರವರೆಗೆ ‘ಚಂದ್ರಕಾಂತ’ ಹಾಗೂ ‘ಬನೇಗಿ ಅಪ್ನಿ ಬಾತ್’ ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದ ಇರ್ಫಾನ್ ಖಾನ್, 1988ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ ಆಗಿರುವಾಗಲೇ ‘ಸಲಾಮ್ ಬಾಂಬೆ’ ಚಿತ್ರದಲ್ಲಿ ನಟನೆಯ ಆಹ್ವಾನ ಪಡೆದುಕೊಂಡಿದ್ರು. ಅಂದಿನಿಂದ ಕ್ರಿಕೆಟ್ ವೃತ್ತಿ ಬದುಕಿನ ಕಡೆಗೆ ಅವರು ತಿರುಗಿ ನೋಡಲಿಲ್ಲ.
“ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ನನಗೆ 300 ರೂ. ಬೇಕಿತ್ತು. ಅಷ್ಟು ಹಣವನ್ನು ಹೊಂದಿಸುವುದು ನನಗೆ ಕಷ್ಟಕರವಾಗಿತ್ತು. ನನ್ನ ತಂಗಿ ಅಂತಿಮವಾಗಿ ಹಣವನ್ನು ಹೊಂದಿಸಿ ಕೊಟ್ಟಿದ್ದಳು” ಎಂದು ಇರ್ಫಾನ್ ಖಾನ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.
“ಕ್ರಿಕೆಟ್ ಬಿಟ್ಟುಕೊಡುವುದು ಪ್ರಜ್ಞಾಪೂರ್ವಕ ನಿರ್ಧಾರ. ಇಡೀ ದೇಶದಲ್ಲಿ ಕೇವಲ 11 ಆಟಗಾರರಿದ್ದಾರೆ. ನಟರ ವಿಚಾರಕ್ಕೆ ಬಂದ್ರೆ ಮಿತಿ ಎನ್ನುವುದೇ ಇಲ್ಲ. ನಟನೆಯಲ್ಲಿ ಯಾವುದೇ ವಯಸ್ಸಿನ ಮಿತಿಯಿಲ್ಲ? ಸಿನಿಮಾ ರಂಗದಲ್ಲಿ ನೀವೇ ನಿಮ್ಮ ಸ್ವಂತ ಆಯುಧ” ಎಂದು ತಮ್ಮ ಸಿನಿಮಾ ಬದುಕಿನ ಆಯ್ಕೆಯನ್ನು ಖಾನ್ ಸಮರ್ಥಿಸಿಕೊಂಡಿದ್ದರು.
ಟಿ20 ಕ್ರಿಕೆಟ್‍ನ ಆಗಮನವು ಆಟವನ್ನು ಹಾಳು ಮಾಡಿದೆ ಎಂದು ಇರ್ಫಾನ್ ಖಾನ್ ವಿಮರ್ಶಾತ್ಮಕ ಹೇಳಿಕೆ ನೀಡಿದ್ದರು. ಅವರು ಸಾಂಪ್ರದಾಯಿಕ ಮಾದರಿ ಟೆಸ್ಟ್ ಪಂದ್ಯದ ದೊಡ್ಡ ಅಭಿಮಾನಿಯಾಗಿದ್ದರು.
”ಕ್ರಿಕೆಟ್ ಕಾ ಡೌನ್ ಹೋನಾ ಭೀ ಚಾಹಿಯೆ! ಕ್ರಿಕೆಟ್ ಸಮಯ ವ್ಯರ್ಥದ ಆಟವಾಗಿ ಪರಿಣಮಿಸಿದೆ. ಟೆಸ್ಟ್ ಪಂದ್ಯದ ಮೋಡಿ, ಆಟಕ್ಕೆ ಹೋಲಿಸಿದರೆ ಈ ಟಿ20 ಅಷ್ಟು ಅದ್ಬುತವಾಗಿಲ್ಲ. ಟಿ20 ಕ್ರಿಕೆಟ್ ಅತ್ಯಾಚಾರದಂತೆ ಕಾಣುತ್ತದೆ. ಎಲ್ಲಾ ರೀತಿಯ ಕೃತ್ಯಗಳು ಅಲ್ಲಿ ನಡೆಯುತ್ತಿವೆ” ಎಂದು ಹೇಳಿದ್ದರು.