Connect with us

Districts

ಕೇಸ್ ವಾಪಸ್ – ಅನರ್ಹ ಶಾಸಕ ಪ್ರತಾಪ್‍ಗೌಡ ಬೇಡಿಕೆ ಈಡೇರಿಸಿದ ಬಿಜೆಪಿ

Published

on

ರಾಯಚೂರು: ಅನರ್ಹ ಶಾಸಕ ಪ್ರತಾಪ್‍ಗೌಡ ಅವರ ಬೇಡಿಕೆಯನ್ನು ಈಡೇರಿಸಲು ಬಿಜೆಪಿ ಯಶಸ್ವಿಯಾಗಿದ್ದು, ಅವರ ವಿರುದ್ಧ ಹೂಡಲಾಗಿದ್ದ ಬೋಗಸ್ ಮತದಾನ ಪ್ರಕರಣವನ್ನು ಬಸನಗೌಡ ತುರ್ವಿಹಾಳ ಅವರು ವಾಪಸ್ ಪಡೆದಿದ್ದಾರೆ.

2018ರ ಚುನಾವಣೆ ವೇಳೆ ತುರ್ವಿಹಾಳ ಅವರು ಮಸ್ಕಿ ಮತಕ್ಷೇತ್ರದಲ್ಲಿ ಬೋಗಸ್ ಮತದಾನ ನಡೆದಿದೆ ಎಂದು ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅನರ್ಹರಾಗಿದ್ದ ಪ್ರತಾಪ್‍ಗೌಡ ಅವರ ಮಸ್ಕಿ ಕ್ಷೇತ್ರಕ್ಕೆ ಚುನಾವಣೆ ನಡೆದಿರಲಿಲ್ಲ. ಆದರೆ ಸದ್ಯ ಏಕಾಏಕಿ ತುರ್ವಿಹಾಳ ಅವರು ಪ್ರಕರಣವನ್ನು ವಾಪಸ್ ಪಡೆದಿದ್ದು, ಪ್ರತಾಪ್‍ಗೌಡ ಅವರ ಹಾದಿ ಸದ್ಯ ಸುಗಮವಾಗಿದೆ.

ಬಿಜೆಪಿ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ತುರ್ವಿಹಾಳ ಅವರು ಪ್ರಕರಣವನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ತುರ್ವಿಹಾಳ ಅವರು 213 ಮತಗಳ ಅಂತರದಲ್ಲಿ 2ನೇ ಸ್ಥಾನವನ್ನು ಪಡೆದಿದ್ದರು. ಈ ಹಿಂದೆ ಪ್ರಕರಣವನ್ನು ವಾಪಸ್ ಪಡೆಯಲು ಹಿಂದೇಟು ಹಾಕಿದ್ದ ತುರ್ವಿಹಾಳ ಅವರು ಸರ್ಕಾರ ನೀಡಿದ್ದ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಅಲ್ಲದೇ ನಾವು ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಆದರೆ ಉಪಚುನಾವಣೆ ಫಲಿತಾಂಶದ ಬಳಿಕ ತಮ್ಮ ಮನಸ್ಸು ಬದಲಿಸಿದ ತುರ್ವಿಹಾಳ ಅವರು ಪ್ರಕರಣವನ್ನು ವಾಪಸ್ ಪಡೆದಿರುವುದರಿಂದ ಮಸ್ಕಿ ಉಪಚುನಾವಣೆಗೆ ಹಾದಿ ಸುಗಮವಾಗಿದೆ. ಮಸ್ಕಿ ಪ್ರಕರಣ ಇತ್ಯರ್ಥವಾದ ಕಾರಣದಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಚುನಾವಣಾ ಪ್ರಕರಣವೂ ಸುಲಭವಾಗಿ ಇತ್ಯರ್ಥವಾಗುವ ಸಾಧ್ಯತೆಯಿದೆ.

ಸದ್ಯ ಬಿಜೆಪಿ ಹೈಕಮಾಂಡ್ ಎದುರು ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ತುರ್ವಿಹಾಳ ಅವರು, ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಒಪ್ಪಿಗೆಯಾಗದ ಕಾರಣ ಇದೇ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಅಲ್ಲದೇ ಪಕ್ಷದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದೆ ಎನ್ನಲಾಗಿದೆ.

ಏನಿದು ಪ್ರಕರಣ: ಬೋಗಸ್ ಮತದಾನ ಪ್ರಕರಣ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿರಲಿಲ್ಲ. ಪ್ರತಾಪ್‍ಗೌಡ ಪಾಟೀಲ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ 213 ಮತದ ಅಂತರದಿಂದ ಸೋತಿದ್ದ ಬಸನಗೌಡ ತುರ್ವಿಹಾಳ ಅವರು ಕೋರ್ಟಿನಲ್ಲಿ ದೂರು ದಾಖಲಿಸಿದ್ದರು. ಪ್ರತಾಪ್ ಗೌಡ ಪುತ್ರಿ ವಿದೇಶದಲ್ಲಿದ್ದರು ಕೂಡ ಅವರ ಮತ ಚಲಾವಣೆಯಾಗಿತ್ತು. ಹೀಗಾಗಿ ಶಾಸಕತ್ವ ಅಸಿಂಧುಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು. ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ಬಾಕಿಯಿದ್ದ ಕಾರಣ ಪ್ರತಾಪ್‍ಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಕೂಡ ಉಪಚುನಾವಣೆ ನಡೆದಿರಲಿಲ್ಲ.

Click to comment

Leave a Reply

Your email address will not be published. Required fields are marked *