ರಾಯಚೂರು: ಮಕರ ಸಂಕ್ರಾಂತಿ ಹಿನ್ನೆಲೆ ಸಂಕ್ರಾಂತಿಯ ಮುನ್ನಾ ದಿನ ಬೋಗಿ ಆಚರಣೆಯನ್ನ ರಾಯಚೂರಿನಲ್ಲಿ ಸಡಗರದಿಂದ ಆಚರಿಸಲಾಗುತ್ತಿದೆ. ಇಂದು ರಾಯಚೂರಿನಲ್ಲಿ ಮನೆ ಮನೆಯ ಮುಂದೆ ರಂಗೋಲಿ ಸಂಭ್ರಮ ಜೋರಾಗಿದೆ. ಬಣ್ಣ ಬಣ್ಣ ರಂಗೋಲಿ ಬಿಡಿಸಿ ಮಹಿಳೆಯರು ಸಂಭ್ರಮಿಸುತ್ತಿದ್ದಾರೆ.
ರಂಗೋಲಿ ಸಂಭ್ರಮದ ಜೊತೆ ಶೇಂಗಾ, ಎಳ್ಳಿನ ಬೆಲ್ಲದ ಹೊಳಿಗೆ ಹಾಗೂ ಭರ್ತ ತಯಾರಿಸಿ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಅಲಸಂದಿ, ಬಟಾಣಿ, ಕ್ಯಾರೆಟ್, ಬದನೆಕಾಯಿ ಸೇರಿ ವಿವಿಧ ತರಕಾರಿ, ಕಾಳುಗಳನ್ನ ಬಳಸಿ ರುಚಿಕರವಾದ ಭರ್ತ ತಯಾರಿಸುತ್ತಾರೆ. ಮುಖ್ಯವಾಗಿ ರೊಟ್ಟಿ ಭರ್ತ ತಯಾರಿಸಲು ಗ್ರಾಮೀಣ ಭಾಗದಲ್ಲಿ ಗ್ಯಾಸ್ ಸ್ಟವ್ ಬಳಸದೇ ಸೌದೆ ಉರಿಸಿ ಅಡುಗೆ ಮಾಡುತ್ತಾರೆ.
ಎರಡು ಎಳ್ಳು ಹಚ್ಚಿದ ರೊಟ್ಟಿ, ಭರ್ತ ದಾನ ಮಾಡಿ ಬೋಗಿ ಹಬ್ಬ ಆಚರಿಸುತ್ತಾರೆ. ಬುಧವಾರ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ಜನರು ನದಿ ಸ್ನಾನ ಮಾಡುತ್ತಾರೆ. ಹೀಗಾಗಿ ಜಿಲ್ಲೆಯ ಕೃಷ್ಣಾ, ತುಂಗಾಭದ್ರಾ ನದಿದಡದಲ್ಲಿ ನಾಳೆ ಸಂಭ್ರಮ ಮನೆಮಾಡಿರುತ್ತದೆ. ಸಂಜೆ ವೇಳೆಗೆ ಎತ್ತುಗಳನ್ನ ಅಲಂಕಾರ ಮಾಡಿ ಕಿಚ್ಚು ಹಾಯಿಸುವ ಮೂಲಕ ರೈತರು ಸಂಕ್ರಾಂತಿಯನ್ನ ಆಚರಿಸಿ ಖುಷಿ ಪಡುತ್ತಾರೆ.