ಬೋಯಿಂಗ್‌ ನಿರ್ಮಿತ ವಾಯುಸೇನೆಯ ಅಪಾಚೆ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

Public TV
3 Min Read
Apache helicopters 2

ನವದೆಹಲಿ: ಭಾರತೀಯ ವಾಯುಪಡೆಗೆ (IAF) ಸೇರಿದ ಅಪಾಚೆ ಹೆಲಿಕಾಪ್ಟರ್ (Apache Attack Helicopter) ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ನಂಗಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಲೆದ್ ಗ್ರಾಮದಲ್ಲಿ ತುರ್ತು ಭೂಸ್ಪರ್ಶ (Emergency Landing) ಮಾಡಿದೆ.

ವರದಿಗಳ ಪ್ರಕಾರ ಯಾವುದೇ ಗಾಯ ಅಥವಾ ಹಾನಿಯಾಗಿಲ್ಲ. ಪಠಾಣ್‌ಕೋಟ್ ವಾಯುನೆಲೆಯಿಂದ ಟೇಕಾಫ್‌ ಆದ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ ನಂತರ ಮುನ್ನೆಚ್ಚರಿಕೆಯಾಗಿ ತೆರೆದ ಮೈದಾನದಲ್ಲಿ ಇಳಿದಿದೆ.

ಜೂನ್ 6 ರಂದು ಉತ್ತರ ಪ್ರದೇಶದ ಸಹರಾನ್‌ಪುರ ಬಳಿ ತರಬೇತಿ ಸಮಯದಲ್ಲಿ ಭಾರತೀಯ ವಾಯುಪಡೆಯ ಮತ್ತೊಂದು ಅಪಾಚೆ ಹೆಲಿಕಾಪ್ಟರ್ ಮುನ್ನೆಚ್ಚರಿಕೆಯಾಗಿ ಇಳಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಇದಕ್ಕೂ ಮೊದಲು ಏಪ್ರಿಲ್ 3 ರಂದು ಲಡಾಖ್‌ನಲ್ಲಿ ಹಾರಾಟ ನಡೆಸುತ್ತಿದ್ದ ಅಪಾಚೆ ಹೆಲಿಕಾಪ್ಟರ್ ಕೂಡ ಖಾರ್ದುಂಗ್ಲಾ ಪಾಸ್ ಬಳಿ ಸುಮಾರು 12,000 ಅಡಿ ಎತ್ತರದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

 

ಬೋಯಿಂಗ್ (Boeing) ತಯಾರಿಸಿದ ಹಲವಾರು ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು ಸುರಕ್ಷತಾ ಕಳವಳಗಳನ್ನು ಹುಟ್ಟುಹಾಕಿದೆ. ಅಷ್ಟೇ ಅಲ್ಲದೇ ಸರಣಿ ಅಪಘಾತಗಳು ನಡೆದಿವೆ. ಕಳೆದ ವರ್ಷ ಅಮೆರಿಕ ಸೇನೆಯ 4 ಹೆಲಿಕಾಪ್ಟರ್‌ ಪತನಗೊಂಡು ಇಬ್ಬರು ಪೈಲಟ್‌ ಮೃತಪಟ್ಟಿದ್ದರು. ಇದನ್ನೂ ಓದಿ: ವಿಮಾನ ದುರಂತ ಬೆನ್ನಲ್ಲೇ ಥೈಲ್ಯಾಂಡಲ್ಲಿ ಏರ್‌ ಇಂಡಿಯಾ ತುರ್ತು ಭೂಸ್ಪರ್ಶ

ಭಾರತದಲ್ಲಿ ವಾಯುಪಡೆಯು ಪ್ರಸ್ತುತ 22 ಅಪಾಚೆ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತಿದೆ ಮತ್ತು ಸೇನೆಯು ಬೋಯಿಂಗ್‌ನಿಂದ ಹೆಚ್ಚುವರಿ 6 ಹೆಲಿಕಾಪ್ಟರ್‌ ಖರೀದಿಗೆ ಆದೇಶ ನೀಡಿದೆ.

2015ರಲ್ಲಿ ಭಾರತ ಸರ್ಕಾರ 13,952 ಕೋಟಿ ರೂ. ವೆಚ್ಚದಲ್ಲಿ ಅಪಾಚೆ ಹೆಲಿಕಾಪ್ಟರ್‌ಗಳ ಖರೀದಿಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 2017ರಲ್ಲಿ ರಕ್ಷಣಾ ಇಲಾಖೆ 6 ಅಪಾಚೆ ಹೆಲಿಕಾಪ್ಟರ್‌ಗಳನ್ನು ಶಸ್ತ್ರಾಸ್ತ್ರ ಸಮೇತ ಖರೀದಿ ಮಾಡಲು 4,168 ಕೋಟಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. 2020ರ ಮಾರ್ಚ್ ವೇಳೆಗೆ ವಾಯುಪಡೆಗೆ 22 ಅಪಾಚೆ ಹೆಲಿಕಾಪ್ಟರ್‌ಗಳು ಸೇರ್ಪಡೆ ಆಗಿದ್ದವು.

Apache Indian Air Force

ಭಾರತದ ವಾಯುಸೇನೆಯಲ್ಲಿ ದಾಳಿ ನಡೆಸಬಲ್ಲ ಹೆಲಿಕಾಪ್ಟರ್‌ಗಳಿವೆ. ಆದರೆ ಅವುಗಳು ಯಾವುದು ಅಪಾಚೆಯಷ್ಟು ಬಲಶಾಲಿಯಾಗಿಲ್ಲ. ರಾತ್ರಿ ಸೇರಿದಂತೆ ಪ್ರತಿಕೂಲ ಹವಾಮಾನದಲ್ಲಿಯೂ ಕೂಡ ಅಪಾಚೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹೆಲಿಕಾಪ್ಟರ್‌ಗಳು ಸೇನೆಯಲ್ಲಿ ಭೂ ದಾಳಿಗಳನ್ನು ಎದುರಿಸುವ, ಭೂ ಸೇನೆಯ ಜೊತೆ ಹೊಂದಿಕೊಂಡು ಕೆಲಸ ಮಾಡಲು ಸಮರ್ಥವಾಗಿದೆ.

ಆಧುನಿಕ ಕ್ಯಾಮೆರಾ, ಡಾಟಾ ಉಪಕರಣಗಳು ವೈರಿಗಳ ಶಸ್ತ್ರಾಸ್ತ್ರಗಳ ಗುರುತು ಪತ್ತೆ, ವೈರಿಗಳ ಚಲನವಲನಗಳನ್ನು ಪತ್ತೆ ಹಚ್ಚೆ ಶೀಘ್ರವಾಗಿ ರವಾನಿಸುತ್ತವೆ. ಅಲ್ಲದೇ ಯುದ್ಧರಂಗದ ಚಿತ್ರಣವನ್ನು ಪ್ರಸಾರ ಮಾಡುವ ಮತ್ತು ಸ್ವೀಕರಿಸುವ ತಾಂತ್ರಿಕತೆ ಹೊಂದಿವೆ. ಅಲ್ಲದೇ ಸ್ಟಿಂಗರ್ ಏರ್ ಟು ಏರ್ ಕ್ಷಿಪಣಿಗಳು, ಗನ್‍ಗಳು ಮತ್ತು ರಾಕೆಟ್‍ಗಳನ್ನು ಹೊಂದಿವೆ. ವಿಶೇಷವಾಗಿ ಪರ್ವತ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಿವೆ. ಇದನ್ನೂ ಓದಿ: ಕನಸಿನ ಮನೆಗೆ ಕಾಲಿಡುವ ಮೊದಲೇ ಸಾವಿನ ಮನೆ ಸೇರಿದ ನರ್ಸ್ ರಂಜಿತಾ

apache

ಭಾರತ ಪೈಲಟ್‍ಗಳಿಗೆ ಅಮೆರಿಕದ ಸೇನಾ ನೆಲೆಯಲ್ಲಿ ತರಬೇತಿ ಸಿಕ್ಕಿತ್ತು. ವಿಶ್ವದ ಅತ್ಯಂತ ಸುಧಾರಿತ ಬಹುಕಾರ್ಯದ ಯುದ್ಧ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಯನ್ನ ಇದು ಪಡೆದಿರುವುದು ವಿಶೇಷ.

ಎಎಚ್-64ಇ ಅಪಾಚೆ ಹೆಲಿಕಾಪ್ಟರ್ ಗಳು ವಿಶ್ವದ ಅತ್ಯಾಧುನಿಕ ಬಹು ಪಾತ್ರದಲ್ಲಿ ಕಾರ್ಯನಿರ್ವಹಿಸುವ ಹೆಲಿಕಾಪ್ಟರ್ ಗಳಲ್ಲಿ ಒಂದಾಗಿದ್ದು, ಭಾರತೀಯ ವಾಯು ಸೇನೆ ಈ ಬಹು ಶತಕೋಟಿ ಡಾಲರ್ ಗುತ್ತಿಗೆಗೆ ಅಮೆರಿಕ ಸರ್ಕಾರ ಹಾಗೂ ಬೋಯಿಂಗ್ ಲಿ. ಜೊತೆಗೆ ಸೆಪ್ಟೆಂಬರ್ 2015ರಲ್ಲಿ 22 ಹೆಲಿಕಾಪ್ಟರ್ ಗಳಿಗೆ ಸಹಿ ಹಾಕಲಾಗಿತ್ತು.

Share This Article