ಗದಗ: ಕೊಲೆ ಮಾಡಿ ಸುಟ್ಟು ಬಿಸಾಕಿರುವ ಸ್ಥಿತಿಯಲ್ಲಿ ಯುವಕನ (Youth) ಶವ ಪತ್ತೆಯಾಗಿರುವ ಘಟನೆ ಗದಗ (Gadag) ತಾಲೂಕಿನ ಹೊಂಬಳ (Hombal) ಹೊರವಲಯದಲ್ಲಿ ನಡೆದಿದೆ.
ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಚಂದ್ರು ಕುರಿ (28) ಮೃತ ಯುವಕ. ಹೊಂಬಳ ಗ್ರಾಮದ ಹೊರವಲಯದ ಸೇತುವೆ ಕೆಳಭಾಗದಲ್ಲಿ ಯುವಕನ ಶವ ಪತ್ತೆಯಾಗಿದೆ. ಚಂದ್ರು ಮಾ.24ರಂದು ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದ. ಯಾರದ್ದೋ ಫೋನ್ ಬಂತು ಎಂದು ಎದ್ದು ಮನೆಯಿಂದ ಆಚೆ ಹೋಗಿದ್ದ. ಬಳಿಕ ನಾಲ್ಕು ದಿನಗಳಾದರೂ ಮನೆಗೆ ಬರಲಿಲ್ಲ. ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಸಿಗದೇ ಇದ್ದಾಗ ಶನಿವಾರ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ಸಹ ದಾಖಲಿಸಿದ್ದಾರೆ. ತನಿಖೆಗಿಳಿದ ಪೊಲೀಸರಿಗೆ ಚಂದ್ರು ಮೃತದೇಹ ಕೊಲೆ ಮಾಡಿ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ವಾರದಲ್ಲಿ ಆಟೋ LPG ದರ 30 ರಿಂದ 40 ರೂ. ಏರಿಕೆ – ಕಲಬುರಗಿಯಲ್ಲಿ ಚಾಲಕರ ಆಕ್ರೋಶ
ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಸೇತುವೆ ಕೆಳಭಾಗದಲ್ಲಿ ಬಿಸಾಕಿ ಅರೆಬರೆ ಸುಟ್ಟು ಹಾಕಿ ಹೋಗಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಚಂದ್ರು ಎರಡು ಕಾರು ಬಾಡಿಗೆ ಓಡಿಸುತ್ತಿದ್ದ. ಚಂದ್ರುಗೆ ಮದುವೆ ಸಹ ಫಿಕ್ಸ್ ಆಗಿತ್ತು. ಮುಂಬರುವ ಬಸವ ಜಯಂತಿಗೆ ಮದುವೆ ಸಿದ್ಧತೆಯಲ್ಲಿದ್ದರು. ಕುಟುಂಬದ ಏಳಿಗೆ ಸಹಿಸದೇ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 80 ಲಕ್ಷ ಜನರಿಂದ ʻNo Kingsʼ ಚಳವಳಿ – ಅಮೆರಿಕದಲ್ಲಿ ಟ್ರಂಪ್ ವಿರುದ್ಧವೇ ಭುಗಿಲೆದ್ದ ಆಕ್ರೋಶ

