- ಚಿತ್ರಹಿಂಸೆ ಆರೋಪ – ತಂದೆ, ಮಲತಾಯಿಗೆ ಧರ್ಮದೇಟು
ಕೋಲ್ಕತ್ತಾ: ಆರ್‌ಜಿಕರ್ ಅತ್ಯಾಚಾರ ಅಪರಾಧಿಯ (RG Kar Case) 11 ವರ್ಷದ ಸೊಸೆಯ ಶವ ಮನೆಯ ಕಪಾಟಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಾವನ್ನಪ್ಪಿದ ಬಾಲಕಿಯನ್ನು ಸುರಂಜನಾ ಸಿಂಗ್ ಎಂದು ಗುರುತಿಸಲಾಗಿದೆ. ಬಾಲಕಿ ಆರ್‌ಜಿಕರ್ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಯಾದ ಸಂಜಯ್ ರಾಯ್‌ನ ಸೊಸೆಯಾಗಿದ್ದಾಳೆ. ಬಾಲಕಿಯ ಅನುಮಾನಾಸ್ಪದ ಸಾವಿನಿಂದ ಕೋಪಗೊಂಡ ಸ್ಥಳೀಯರು ಆಕೆಯ ತಂದೆ ಮತ್ತು ಮಲತಾಯಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ನಿಲ್ಲಿಸಿ, ದುರ್ಗಾಪೂಜೆಗೆ ಗಮನ ಹರಿಸಿ – ದೀದಿ ಹೇಳಿಕೆಗೆ ಮೃತ ಟ್ರೈನಿ ವೈದ್ಯೆಯ ತಾಯಿ ಆಕ್ರೋಶ
ಬಾಲಕಿಯ ಶವ ಪತ್ತೆಯಾಗುತ್ತಿದ್ದಂತೆ ಆಕೆಯ ತಂದೆ ಭೋಲಾ ಸಿಂಗ್ ಮತ್ತು ಅವನ ಪತ್ನಿ ಪೂಜಾ ದಂಪತಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ, ನೆರೆಹೊರೆಯವರು ಮಲತಾಯಿಯ ಕೂದಲನ್ನು ಎಳೆದುಕೊಂಡು ಹೋಗಿ ಹೊಡೆದಿದ್ದಾರೆ. ಅಲ್ಲದೇ ಭೋಲಾ ಸಿಂಗ್ ಮೇಲೆ ಶೂಗಳಿಂದ ಥಳಿಸಿದ್ದಾರೆ. ಬಳಿಕ ಪೊಲೀಸರು ಉದ್ರಿಕ್ತರಿಂದ ರಕ್ಷಿಸಿ ಅಲಿಪೋರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಭೋಲಾ ಸಿಂಗ್ ಈ ಹಿಂದೆ ಸಂಜಯ್ ರಾಯ್‌ನ ಅಕ್ಕ ಬಬಿತಾ ಅವರನ್ನು ವಿವಾಹವಾಗಿದ್ದು, ಸುರಂಜನಾ ಅವರ ಏಕೈಕ ಮಗಳಾಗಿದ್ದಳು. ಕೆಲವು ವರ್ಷಗಳ ಹಿಂದೆ ಬಬಿತಾ ಆತ್ಮಹತ್ಯೆ ಮಾಡಿಕೊಂಡ ನಂತರ, ಆತ ಆಕೆಯ ತಂಗಿ ಪೂಜಾಳನ್ನು ಮದುವೆಯಾಗಿದ್ದ.
ಪೋಷಕರು ಬಾಲಕಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಮಗುವನ್ನು ರಾತ್ರಿ ವೇಳೆ ಮನೆಯಿಂದ ಹೊರಗೆ ಹಾಕಲಾಗುತ್ತಿತ್ತು. ಕೆಲವೊಮ್ಮೆ ಬೆಳಗಿನ ಜಾವ 2 ಗಂಟೆಯವರೆಗೂ ಹೊರಗೆ ಹಾಕಲಾಗುತ್ತಿತ್ತು. ಈ ದೌರ್ಜನ್ಯ ಆಕೆಯನ್ನು ತೀವ್ರವಾಗಿ ನೋಯಿಸಿತ್ತು ಎಂದು ನೆರೆಹೊರೆಯವರು ಆರೋಪಿಸಿದ್ದಾರೆ.
ಬಾಲಕಿಯ ಅಜ್ಜಿ, ಪೋಷಕರು ಆಕೆಗೆ ಬೆಲ್ಟ್‌ಗಳಿಂದ ಹೊಡೆಯುತ್ತಿದ್ದರು. ಆಕೆಯ ತಲೆಯನ್ನು ಗೋಡೆಗಳಿಗೆ ಹೊಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಇದರ ನಡುವೆ ʻನನ್ನ ಮಗು ಉಳಿದಿಲ್ಲ, ನನ್ನ ಜೀವನಕ್ಕೆ ಅರ್ಥವಿಲ್ಲʼ ಎಂದು ಬಾಲಕಿಯ ತಂದೆ ಕಣ್ಣೀರಿಟ್ಟಿದ್ದಾನೆ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎನ್ನಲಾಗುತ್ತಿದೆ. ಅಲ್ಲದೇ ಕೊಲೆಯ ಶಂಕೆಯೂ ಇದೆ. ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಳಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಶವವಾಗಿ ಪತ್ತೆ