ಕೋಲ್ಕತ: ಟಿಎಂಸಿ ಹಾಗೂ ಬಿಜೆಪಿ ನಡುವೆ ದೀದಿ ನಾಡಲ್ಲಿ ರಾಜಕೀಯ ದ್ವೇಷ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ್ತೊಂದು ಬಿಜೆಪಿ ಕಾರ್ಯಕರ್ತನ ಶವ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾಗಿದೆ. ಈ ಹಿನ್ನೆಲೆ ಬಿಜೆಪಿ ಹಾಗೂ ಟಿಎಂಸಿ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಹಲವೆಡೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕವೂ ಟಿಎಂಸಿ ಕಾರ್ಯಕರ್ತರು ಹಾಗೂ ಬಿಜೆಪಿ ನಡುವೆ ಗಲಾಟೆಗಳು ನಡೆಯುತ್ತಲೇ ಇದ್ದು ಹಿಂಸಾಚಾರ ಭುಗಿಲೆದ್ದಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರು ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗುತ್ತಿರುವುದು ಪಶ್ಚಿಮ ಬಂಗಾಳದ ಬಿಗುವಿನ ವಾತಾವರಣ ಸೃಷ್ಟಿಸಿದೆ.
Advertisement
Advertisement
ಪಶ್ಚಿಮ ಬಂಗಾಳದ ಹೌರಾದ ಸರ್ಪೋಟಾ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಸಮಟುಲ್ ದೊಲುಯಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೊಲುಯಿ ಸಾವಿಗೆ ಟಿಎಂಸಿ ಕಲಾರ್ಯಕರ್ತರೇ ಕಾರಣವೆಂದು ದೊಲುಯಿ ಕುಟುಂಬಸ್ಥರು ಹಾಗೂ ಹೌರಾದ ಬಿಜೆಪಿ ನಾಯಕರು ಟಿಎಂಸಿ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಇತ್ತೀಚೆಗೆ ದೊಲುಯಿ ಅವರು ಸ್ಥಳೀಯ ಪ್ರದೇಶಗಳಲ್ಲಿ `ಜೈ ಶ್ರೀರಾಮ್’ ರ‍್ಯಾಲಿಗಳನ್ನು ಮಾಡುತ್ತಿದ್ದರು. ಆದ್ದರಿಂದ ಅವರಿಗೆ ಪ್ರಾಣ ಬೆದರಿಕೆ ಕೂಡ ಹಾಕಲಾಗಿತ್ತು ಎಂದು ಹೌರಾದ ಗ್ರಾಮೀಣ ಭಾಗದ ಬಿಜೆಪಿ ಅಧ್ಯಕ್ಷ ಅನುಪಮ್ ತಿಳಿಸಿದ್ದಾರೆ.
Advertisement
ಅಲ್ಲದೆ, ದೊಲುಯಿ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುತ್ತಿರುವ ವೇಳೆ ಕೆಲ ಕಿಡಿಗೇಡಿಗಳು ಶವವನ್ನು ಹೊತ್ತೊಯ್ಯಲು ಯತ್ನಿಸಿದ್ದು, ಗ್ರಾಮಸ್ಥರು ಈ ವಿಚಾರಕ್ಕೆ ಪ್ರತಿಭಟನೆ ಕೂಡ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಆರ್‌ಎಎಫ್ (ರ‍್ಯಾಪಿಡ್ ಆಕ್ಷನ್ ಫೋರ್ಸ್) ಅನ್ನು ನಿಯೋಜಿಸಿದೆ.
Advertisement
ಭಾನುವಾರದಂದು ಆರ್‍ಎಸ್‍ಎಸ್ ಹಿರಿಯ ಸ್ವದೇಶ್ ಮನ್ನಾ ಅವರ ಮೃತದೇಹವೂ ಕೂಡ ಅಟ್ಚಾಟಾ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲೇ ಪತ್ತೆಯಾಗಿತ್ತು. ಅಲ್ಲದೆ, ದೊಲುಯಿ ಹಾಗೂ ಸ್ವದೇಶ್ ಇಬ್ಬರು `ಜೈ ಶ್ರೀರಾಮ್’ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು ಎಂದು ಎನ್ನಲಾಗಿದೆ. ಈ ಹಿನ್ನೆಲೆ ಇಬ್ಬರನ್ನೂ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಹತ್ಯೆ ಮಾಡಿದ್ದಾರೆ ಎಂದು ಅನುಪಮ್ ಆರೋಪಿಸಿದ್ದಾರೆ.
ಬಿಜೆಪಿ ಆರೋಪವನ್ನು ಟಿಎಂಸಿ ಎಂಎಲ್‍ಎ ಪುಲಕ್ ರಾಯ್ ತಳ್ಳಿಹಾಕಿದ್ದಾರೆ. ತಮ್ಮ ಪಕ್ಷದ ಈ ರೀತಿ ಮಾಡಿಲ್ಲ ಎಂದು ಕಾರ್ಯಕರ್ತರ ಪರವಹಿಸಿದ್ದಾರೆ. ಅಲ್ಲದೆ, ಬಿಜೆಪಿ ಅವರು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟಿಎಂಸಿಯ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರು ಮಾತನಾಡಿ, ಬಿಜೆಪಿಯವರು ಸುಮ್ಮನೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿರುವ ಟಿಎಂಸಿ ಸರ್ಕಾರವನ್ನು ಬೀಳಿಸಿ ಇಲ್ಲಿ ರಾಷ್ಟ್ರಪತಿ ಆಡಳಿತ ತರಲು ಅವರು ಪ್ರಯತ್ನಿಸುತ್ತಿದ್ದಾರೆ. ಟಿಎಂಸಿ ಕಾರ್ಯಕರ್ತರು ಕೂಡ ಸಾವನ್ನಪ್ಪಿದ್ದಾರೆ. ಅವರ ಮನೆಗಳ ಮೇಲೆ ಕೂಡ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆದರೆ ಈ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.