ಚಿಕ್ಕಬಳ್ಳಾಪುರ: ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗುವುದು ಅನಿವಾರ್ಯವಾಗಿತ್ತು. ಅದೇ ರೀತಿ ನನ್ನ ಮಗನಿಗೆ ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿತ್ತು. ಹೀಗಾಗಿಯೇ ಉಪಚುನಾವಣೆ ಕಣದಲ್ಲಿ ಸ್ಪರ್ಧೆ ಮಾಡಿದ್ದಾನೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ತಮ್ಮ ಮಗನ ಪರ ಬ್ಯಾಟಿಂಗ್ ಮಾಡಿದ್ದಾರೆ.
ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ವೀಕ್ಷಿಸಿ ಬಳಿಕ ಬಚ್ಚೇಗೌಡ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಬಿಜೆಪಿಯಿಂದ ಶರತ್ ಬಚ್ಚೇಗೌಡಗೆ ಟಿಕೆಟ್ ಕೇಳಿದ್ದರೂ ರಾಜ್ಯಾಧ್ಯಕ್ಷರು ನಿರಾಕರಿಸಿದ್ದರು. ಆದರೆ ಶರತ್ ಕ್ಷೇತ್ರದಲ್ಲಿ ಅಸ್ತಿತ್ವಕ್ಕಾಗಿ ಸ್ಪರ್ಧೆ ಮಾಡಿದ್ದ. ಆದರೆ ನಾನು ಮಗನ ಪರವಾಗಿ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾವಣಾ ಪ್ರಚಾರ ಮಾಡಲಿಲ್ಲ. ಆದರೆ ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ಎದುರಿಸಿದ್ದ ಶರತ್ ಬಚ್ಚೇಗೌಡ ಜನರ ಆಶೀರ್ವಾದದಿಂದ ಗೆಲುವು ಸಾಧಿಸಿದ್ದಾನೆ ಎಂದರು.
Advertisement
Advertisement
ಇದೇ ವೇಳೆ ಸಿಎಎ ಹಾಗೂ ಎನ್‍ಆರ್ ಸಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿಎಎ ಹಾಗೂ ಎನ್‍ಆರ್ ಸಿ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಅಗತ್ಯವಿಲ್ಲ. ತಿಳುವಳಿಕೆಯಿಲ್ಲದೆ ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಸಿಎಎ ಹಾಗೂ ಎನ್‍ಆರ್ ಸಿ ಬಗ್ಗೆ ಅವರಿಗೆ ತಿಳುವಳಿಕೆ ನೀಡಬೇಕಿದೆ. ಸಿಎಎ ಹಾಗೂ ಎನ್‍ಆರ್ ಸಿ ಬಗ್ಗೆ ಒಂದು ಧರ್ಮದವರಿಗೆ ಗೊಂದಲವಿದೆ. ಹೀಗಾಗಿ ನಾನಾ ರಾಜ್ಯದಲ್ಲಿ ಕಾಯಿದೆಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಬಿಲ್ ಪಾಸ್ ಆದಾಗ ನಾನು ಲೋಕಸಭೆಯಲ್ಲಿದ್ದೆ. ಸಿಎಎ ಹಾಗೂ ಎನ್‍ಆರ್ ಸಿ ಯಿಂದ ಈಗಲೂ ಯಾವುದೇ ಧರ್ಮದವರಿಗೂ ತೊಂದರೆ ಆಗೋದಿಲ್ಲ. ಈಗಾಗಲೇ ಜನರಿಗೆ ಜಾಗೃತಿ ಮೂಡಿಸಿ ಗೊಂದಲಗಳನ್ನು ಸಡಿ ಮಾಡಲು ಮೋದಿ, ಅಮಿತ್ ಶಾ ಒಪ್ಪಿಕೊಂಡಿದ್ದಾರೆ ಎಂದರು.
Advertisement
ಮಂಗಳೂರಿನಲ್ಲಿ ಗೋಲಿಬಾರ್ ನಡೆದ ನಂತರ ಸಿಎಂ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ಮಾಡಲಾಗಿದೆ. ಆದರೆ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದ್ರು. ಕಾಂಗ್ರೆಸ್, ಜೆಡಿಎಸ್ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ವಿರೋಧ ಪಕ್ಷಗಳು ಇರೋದು ವಿರೋಧ ಮಾಡಲಿಕ್ಕೆ ಎಂದರು.