ಚಿಕ್ಕಬಳ್ಳಾಪುರ: ನನ್ನ ವಿರುದ್ಧ ಎಂಟಿಬಿ ನಾಗರಾಜ್ ನೀಡಿರುವ ದೂರಿಗೆ ನಾನು ಹೆದರುವವನಲ್ಲ. ಎಂಟಿಬಿ ದೂರನ್ನ ನಾನು ಲೆಕ್ಕಕ್ಕೇ ಇಡಲ್ಲ. ಅದಕ್ಕೆಲ್ಲ ಕೇರ್ ಮಾಡಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್ ಬಚ್ಚೇಗೌಡ ಸಿಡಿದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಡೆದ ದಿಶಾ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಚ್ಚೇಗೌಡರು, ಎಂಟಿಬಿ ನಾಗರಾಜ್ ತಮ್ಮ ವಿರುದ್ಧ ಸಿಎಂಗೆ ದೂರು ಕೊಟ್ಟಿರುವ ಕುರಿತು ಕೇಳಿದ ಪ್ರಶ್ನಗೆ ಖಡಕ್ ಆಗಿ ಪ್ರತಿಕ್ರಿಯಿಸಿದರು. ದೂರು ಕೊಟ್ಟರೆ ಕೊಡಲಿ ಅದಕ್ಕೆಲ್ಲಾ ಹೆದರಲ್ಲ, ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತೇನೆ. ಅದೆಲ್ಲ ನನಗೆ ಲೆಕ್ಕಾನೇ ಇಲ್ಲ. ಹಿಂದಿನಿಂದಲೂ ನಾನು ರಾಜಕಾರಣ ಮಾಡಿಕೊಂಡು ಬಂದವನು, ನಾನು ರಾಜಕೀಯಕ್ಕೆ ಹೊಸಬನಲ್ಲ. ಇಂತಹ ದೂರುಗಳನ್ನ ಲೆಕ್ಕಕ್ಕೇ ಇಡಲ್ಲ, ಕೇರ್ ಮಾಡಲ್ಲ ಎಂದು ಮಾತಿನ ಚಾಟಿ ಬೀಸಿದರು.
Advertisement
Advertisement
ಇಂತಹ ನೂರೆಂಟು ದೂರುಗಳು ಕೊಟ್ಟಿದ್ದಾರೆ. ದೂರು ಕೊಟ್ರೆ ನನಗೇನು ಆಗಬೇಕು? ಬಚ್ಚೇಗೌಡನನ್ನ ಯಾರೂ ಏನು ಮಾಡಕ್ಕೆ ಆಗಲ್ಲ. ಯಾರು ಏನು ಕ್ರಮ ತಗೊಳ್ತಾರೆ ನಾನು ನೋಡ್ತೀನಿ. ಅದೇನು ಕ್ರಮ ತಗೋತಾರೆ? ನನ್ನ ಸದಸ್ಯತ್ವದಿಂದ ಕಿತ್ತಾಕೋಕೆ ಆಗುತ್ತಾ? ಕ್ಷೇತ್ರದ ಜನ ಪ್ರೀತಿಯಿಂದ ಎರಡು ಲಕ್ಷ ಮತಗಳ ಅಂತರದಿಂದ ನನಗೆ ಗೆಲುವು ತಂದುಕೊಟ್ಟಿದ್ದಾರೆ. ಹೇಗೆ ಸದಸ್ಯತ್ವದಿಂದ ಕಿತ್ತಾಕೋಕೆ ಆಗುತ್ತೆ? ನನ್ನ ಎಂಪಿ ಸ್ಥಾನ ಹೋದರೆ ಪಕ್ಷಕ್ಕೆ ಒಂದು ಸ್ಥಾನ ಲಾಸ್ ಆಗುತ್ತೆ ಅಷ್ಟೇ. ನನ್ನ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತಾ? ಇಲ್ಲಾ ಪಕ್ಷದಿಂದ ಉಚ್ಚಾಟನೆ ಮಾಡುತ್ತಾ ಮಾಡಲಿ ಅದು ಅವರಿಗೆ ನಷ್ಟ ಎಂದು ಹರಿಹಾಯ್ದರು.
Advertisement
ಮತದಾರರು ಇಂದು ಭ್ರಷ್ಟರಾಗಿದ್ದಾರೆಂದು ಕೋಲಾರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹೊಸಕೋಟೆಯ ಮಾಜಿ ಶಾಸಕ ಎಂಟಿಬಿ ನಾಗರಾಜ್ ನೀಡಿರುವ ಹೇಳಿಕೆಗೆ ಬಚ್ಚೇಗೌಡರು ಪ್ರತಿಕ್ರಿಯೆ ನೀಡಿದರು. ಯಾರು ಭ್ರಷ್ಟರಾಗಿಲ್ಲ? ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟರಾಗಿಲ್ಲವೇ ಎಂದು ಪ್ರಶ್ನಿಸಿ ಎಂಟಿಬಿಗೆ ಟಾಂಗ್ ಕೊಟ್ಟರು. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಮತದಾರರನ್ನು ಅವಮಾನಿಸುವುದು ಸರಿಯಲ್ಲ. ಜನ ಸ್ವಾಭಿಮಾನ ಎತ್ತಿ ಹಿಡಿದು ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಿರಬಹುದು. ಅದಕ್ಕೆ ಮತದಾರರು ಹೇಗೆ ಭ್ರಷ್ಟರು ಆಗುತ್ತಾರೆ? ಇದನ್ನ ನಾನು ಒಪ್ಪುವುದಿಲ್ಲ ಎಂದು ತಿರುಗೇಟು ನೀಡಿದರು. ಜಟ್ಟಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನುವ ತರ ಎಂಟಿಬಿ ನಡೆ ಎಂದು ಟೀಕಿಸಿದರು.