ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಿಲ್ಲರ್ ಬಿಎಂಟಿಸಿಗೆ ಬಲಿಯಾಗಿದೆ. ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಂದನೂರು ಚಿಂತನ್(26) ಮೃತ ದುರ್ದೈವಿ. ಶಾಂತಿನಗರ ಬಸ್ ನಿಲ್ದಾಣದ ಬಿಟಿಎಸ್ ರಸ್ತೆ ಬಳಿ ಘಟನೆ ನಡೆದಿದ್ದು, ಪ್ರಯಾಣಿಕ ಅಂದನೂರ್ ಚಿಂತನ್ ಶಿವಾಜಿನಗರಕ್ಕೆ ಹೋಗುವ ಬಸ್ ಹತ್ತಿದ್ದನು. ಈ ವೇಳೆ ಚಿಂತನ್ ಮೆಜೆಸ್ಟಿಕ್‍ಗೆ ಬಸ್ ಹೋಗುತ್ತಾ ಎಂದು ಕೇಳಿದ್ದನು.
ಮೆಜೆಸ್ಟಿಕ್‍ಗೆ ಬಸ್ ಹೋಗಲ್ಲ ಎಂದಾಗ ಚಿಂತನ್ ಓಪನ್ ಇದ್ದ ಡೋರಿನಿಂದ ಇಳಿಯಲು ಹೋಗಿದ್ದನು. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದ ಚಿಂತನ್ ಬಸ್ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಬಿಎಂಟಿಸಿ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿದ್ದ ಚಿಂತನ್ ತಲೆ ಮೇಲೆ ಬಸ್ ಹರಿದಿದೆ.
ಪ್ರಯಾಣಿಕರನ್ನು ಹತ್ತಿಸಿಕೊಂಡು ಚಾಲಕ ಬಾಗಿಲು ಹಾಕದ ಹಿನ್ನೆಲೆಯಲ್ಲಿ ಆತನ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಯುವಕನ ಸಾವಿಗೆ ಕಾರಣನಾದ ಚಾಲಕನ ವಿರುದ್ಧ ಕಲಂ 279, 304(ಎ) ಐಪಿಸಿ ಪ್ರಕಾರ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪ್ರತ್ಯಕ್ಷದರ್ಶಿ ಬಸವರಾಜ್ ದೂರಿನ್ವಯ ಪ್ರಕರಣ ದಾಖಲಾಗಿದೆ.