– ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಕಕ್ಕಾಬಿಕ್ಕಿ
ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮೆಕ್ಯಾನಿಕಲ್ ಎಂಜಿನಿಯರೊಬ್ಬರಿಗೆ ನಿವೃತ್ತಿ ಹೊಂದುವ ಕೇವಲ 3 ಗಂಟೆ ಮೊದಲು ಬಿಎಂಟಿಸಿ ಸಸ್ಪೆಂಡ್ ಆರ್ಡರ್ ನೀಡಿದೆ.
ಬಿಎಂಟಿಸಿಯಲ್ಲಿ ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಗಂಗಣ್ಣಗೌಡರು ಸಸ್ಪೆಂಡ್ ಆರ್ಡರ್ ಪಡೆದು ಕಂಗಾಲಾಗಿದ್ದಾರೆ. ರಾಜ್ಯ ಸಾರಿಗೆ ಇಲಾಖೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಗಂಗಣ್ಣ ಅವರು ಎಷ್ಟೋ ಬಸ್‍ಗಳಿಗೆ ಮರು ಜೀವ ತುಂಬಿದ್ದರು. ಆದ್ರೆ ಬಿಎಂಟಿಸಿಯಲ್ಲಿ ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ನಿವೃತ್ತಿ ಹೊಂದಬೇಕಾಗಿದ್ದ ದಿನವೇ ಬಿಎಂಟಿಸಿ ಗಂಗಣ್ಣ ಅವರಿಗೆ ಸಸ್ಪೆಂಡ್ ಆರ್ಡರ್ ನೀಡಿ ಶಾಕ್ ಕೊಟ್ಟಿದೆ.
Advertisement
Advertisement
34 ವರ್ಷಗಳ ಕಾಲ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡಿ ನೆಮ್ಮದಿಯ ನಿವೃತ್ತಿ ಜೀವನ ಮಾಡಬೇಕಾಗಿದ್ದ ಗಂಗಣ್ಣ ಅವರು ಸೇವೆಯ ಕೊನೆಯ ದಿನ ಅಮಾನತುಗೊಂಡು ಚಿಂತೆಯಲ್ಲಿ ಕುಳಿತಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಬಿಎಂಟಿಸಿಯಲ್ಲಿ ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಗಂಗಣ್ಣ, ತಮ್ಮ ಅವಧಿಯಲ್ಲಿ ಬಸ್ ಬ್ರೇಕ್ ಡೌನ್ ಆಗಿ ನಿಲ್ಲೋದನ್ನ ಅತ್ಯಂತ ಕಡಿಮೆ ಮಟ್ಟಕ್ಕೆ ತಂದಿದ್ದರು. ಈ ಹಿಂದೆ ವರ್ಷಕ್ಕೆ 1500 ರಿಂದ 1800 ಬಸ್‍ಗಳು ಆನ್ ರೋಡ್ ಬ್ರೇಕ್ ಡೌನ್ ಆಗಿ ನಿಲ್ಲುತ್ತಿತ್ತು. ಆದ್ರೆ ಗಂಗಣ್ಣ ಅವರು ಚೀಫ್ ಎಂಜಿನಿಯರ್ ಆದ ಮೇಲೆ ವರ್ಷಕ್ಕೆ 1500 ಆನ್ ರೋಡ್ ಬ್ರೇಕ್ ಡೌನ್ ಪ್ರಕರಣಗಳಿಂದ 300ಕ್ಕೆ ತಂದಿದ್ದರು. ಆದ್ರೆ ಇವರ ಅವಧಿಯಲ್ಲಿ ಬಸ್‍ಗಳು ಹೆಚ್ಚು ಕಾಲ ಶೇಡ್ ನಲ್ಲಿ ನಿಂತಿದೆ ಎಂದು ಆರೋಪಿಸಿ ನಿವೃತ್ತಿಗೊಳ್ಳೋ ಮೂರು ಗಂಟೆ ಮುಂಚೆ ಬಿಎಂಟಿಸಿ ಎಂಡಿ ಗಂಗಣ್ಣ ಅವರನ್ನು ಅಮಾನತು ಮಾಡಿದ್ದಾರೆ.
Advertisement
Advertisement
ಈ ಬಗ್ಗೆ ಮಾತಾನಾಡಿದ ಎಐಟಿಯುಸಿ ಅಧ್ಯಕ್ಷ ಅನಂತಸುಬ್ಬ ರಾವ್, ಸಾರಿಗೆ ಇಲಾಖೆಗೆ ಮಂತ್ರಿಯಾಗಿ ಡಿ.ಸಿ ತಮ್ಮಣ್ಣ ಬಂದಾಗಿನಿಂದ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಗಂಗಣ್ಣಗೌಡ ಒಬ್ಬ ದಕ್ಷ ಅಧಿಕಾರಿ. ಮಂತ್ರಿಗಳು ಹಣದಾಸೆಗೆ ಅವರು ಹೇಳಿದಂತೆ ಕೆಲಸ ಮಾಡಲಿಲ್ಲ ಎಂದು ಗಂಗಣ್ಣಗೌಡ ಅವರನ್ನು ಅಮಾನತು ಮಾಡಿದ್ದಾರೆ. ಹಾಗೆಯೇ ದಕ್ಷ ಅಧಿಕಾರಿಗಳಿಗೆ ಒಂದು ಸಂದೇಶ ರವಾನಿಸಿದ್ದಾರೆ. ತಮ್ಮ ವಿರುದ್ಧವಾಗಿ ಕೆಲಸ ಮಾಡಿದರೆ ಇದೇ ಗತಿ ಎಂದು ತೋರಿಸಲು ಮಂತ್ರಿಗಳು ಮಾಡಿರೋ ಕುತಂತ್ರವಿದು, ಗಂಗಣ್ಣಗೌಡರನ್ನ ಬಲಿಪಶು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv