ChikkaballapurCrimeDistrictsKarnatakaLatest

ಅಪಘಾತಕ್ಕೀಡಾಗಿ ಲಾರಿಯ ಹಿಂಬದಿ ಚಕ್ರದಲ್ಲಿ ಸಿಲುಕಿದ ಬೈಕ್!

Advertisements

– ಬಿಎಂಟಿಸಿ ನೌಕರ ದುರ್ಮರಣ

ಚಿಕ್ಕಬಳ್ಳಾಪುರ: ಬೃಹತ್ ಗಾತ್ರದ ಗ್ರಾನೈಟ್ ಕಲ್ಲು ದಿಮ್ಮೆ ಹೊತ್ತು ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ರ ಮಂಚನಬಲೆ ಗ್ರಾಮದ ಸೇತುವೆ ಬಳಿ ನಡೆದಿದೆ.

ಮೃತ ವ್ಯಕ್ತಿ ಗುಡಿಬಂಡೆ ತಾಲೂಕು ಮದ್ದರೆಡ್ಡಿಹಳ್ಳಿಯ ನಿವಾಸಿ ನಾಗೇಶ್ ಎಂದು ತಿಳಿದುಬಂದಿದೆ. ಇವರು ಬಿಎಂಟಿಸಿ ನೌಕರರಾಗಿದ್ದು, ಕರ್ತವ್ಯಕ್ಕೆ ಹಾಜರಾಗಲು ಸ್ವಗ್ರಾಮದಿಂದ ಬೆಂಗಳೂರಿಗೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಬೈಕ್ ಲಾರಿಯ ಹಿಂಬದಿಯ ಚಕ್ರದಲ್ಲೇ ಸಿಲುಕಿ ಹಾಕಿಕೊಂಡಿದ್ದು, ನಾಗೇಶ್ ನಡುರಸ್ತೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಲಾರಿಯ ಹಿಂಬದಿಯಲ್ಲಿ ಯಾವುದೇ ಇಂಡಿಕೇಟರ್ ಗಳು ಇಲ್ಲದೆ ಕತ್ತಲಲ್ಲೇ ಸಾಗುತ್ತಿದ್ದುದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಅಪಘಾತದ ನಂತರ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Back to top button