ಬೆಂಗಳೂರು: ಬಿಎಂಟಿಸಿ ಬಸ್ (BMTC) ಚಾಲಕನ ಮೇಲೆ ಮಹಿಳೆಯಿಂದ ಹಲ್ಲೆ ಪ್ರಕರಣ ಸಂಬಂಧ, ಘಟನೆ ಖಂಡಿಸಿ ಡಿಪೋ 22 ಚಾಲಕರು (Drivers) ಬಸ್ ತೆಗೆಯದೇ ಪ್ರತಿಭಟನೆ ಮಾಡಿದರೆ ಅತ್ತ ಹಲ್ಲೆ ಮಾಡಿದ ಮಹಿಳೆ ಆಸ್ಪತ್ರೆಗೆ (Hospital) ದಾಖಲಾಗಿ ಬಿಎಂಟಿಸಿ ಚಾಲಕನದ್ದೇ ತಪ್ಪು ಎಂದು ಆರೋಪ ಮಾಡಿದ್ದಾಳೆ.
ಶನಿವಾರ ಬೆಂಗಳೂರಿನ ಸುಮ್ಮನಹಳ್ಳಿ ಬಳಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನ ಮೇಲೆ ಮಹಿಳೆ ಅಟ್ಟಹಾಸ ಮೆರೆದಿದ್ದಳು. ಮುಂದೆ ಹೋಗುತ್ತಿದ್ದ ಸ್ಕೂಟರ್‌ಗೆ ಬಸ್ ತಾಗಿದ್ದಕ್ಕೆ ಉಗ್ರರೂಪ ತಾಳಿದ ಮಹಿಳೆ ಬಸ್ಸಿಗೆ ನುಗ್ಗಿ ಪ್ರಯಾಣಿಕರ ಎದುರೇ ಹಿಗ್ಗಾಮುಗ್ಗಾ ಥಳಿಸಿದ್ದಳು.
ಮಹಿಳೆಯ ಏಟಿಗೆ ಚಾಲಕ ಬಸ್‌ನಲ್ಲೇ ಕುಸಿದು ಬಿದ್ದಿದ್ದ. ಯಾರು ಬಿಡಿಸಿದರೂ ಜಗ್ಗದ ಮಹಿಳೆ ರೌದ್ರಾವತಾರವನ್ನೇ ತಾಳಿದ್ದಳು. ಈ ಘಟನೆ ಖಂಡಿಸಿ ಡಿಪೋ ನಂಬರ್ 22ರ ಇವಿ ಬಸ್ ಚಾಲಕರು (EV Bus Drivers) ಡಿಪೋ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಇವಿಎಂ ದೂರೋದನ್ನು ನಿಲ್ಲಿಸಿ, ಫಲಿತಾಂಶವನ್ನು ಸ್ವೀಕರಿಸಿ – ಕಾಂಗ್ರೆಸ್‌ಗೆ ಉಮರ್ ಅಬ್ದುಲ್ಲಾ ಕಿವಿಮಾತು
ಘಟನೆ ಸಂಬಂಧ ನಿನ್ನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಎಫ್‌ಐಆರ್ ಕೂಡ ಆಗಿತ್ತು. ಕೇಸ್ ದಾಖಲಾದ ಬಳಿಕ ರಾತ್ರಿ ಮಹಿಳೆಯನ್ನು ಠಾಣಾ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಇದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಇಂದು ಪೀಣ್ಯ ಡಿಪೋದ 100ಕ್ಕೂ ಹೆಚ್ಚು ಬಸ್ಸುಗಳನ್ನು ನಿಲ್ಲಿಸಿ ನೂರಾರು ಚಾಲಕರು ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ಬಸ್ಸುಗಳನ್ನು ಹೊರ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಮಹಿಳೆಯನ್ನು ಬಂಧಿಸುವವರೆಗೆ ಬಸ್ ತೆಗೆಯಲ್ಲ ಅಂತ ಹಠ ಹಿಡಿದರು.
ಮಹಿಳೆ ಆಸ್ಪತ್ರೆಗೆ ದಾಖಲು:
ಇತ್ತ ಚಾಲಕರು ಪ್ರತಿಭಟನೆ ಮಾಡುತ್ತಿದ್ದರೆ ಅತ್ತ ಹಲ್ಲೆ ಮಾಡಿದ ಸವಿತಾ ಬಸ್ ತಾಗಿದ್ದಕ್ಕೆ ಗಾಯವಾಗಿದೆ ಎಂದು ಹೇಳಿ ಆಸ್ಪತ್ರೆ ಸೇರಿದ್ದಾಳೆ. ಆಸ್ಪತ್ರೆಯಿಂದಲೇ ವಿಡಿಯೊ ಮುಖಾಂತರ ಸ್ಪಷ್ಟನೆ ನೀಡಿದ್ದಾಳೆ. ಘಟನೆಗೆ ಬಿಎಂಟಿಸಿ ಚಾಲಕನೆ ಕಾರಣ. ನಾನು ಗಾಡಿ ಓಡಿಸಿಕೊಂಡು ಹೋಗುವಾಗ ಉದ್ದೇಶ ಪೂರ್ವಕವಾಗಿ ಹಾರ್ನ್ ಮಾಡುತ್ತಿದ್ದ. ಈ ವೇಳೆ ಬೇಕಂತಲೇ ಗಾಡಿ ಟಚ್ ಮಾಡಿದ್ದಾನೆ. ಗಾಡಿಯಲ್ಲಿ ನನ್ನ ಮಗ ಇದ್ದ. ಅವನು ಕೆಳಗೆ ಬಿದ್ದು ಗಾಯಗೊಂಡಿದ್ದಕ್ಕೆ ಆಕ್ರೋಶದಿಂದ ಹಲ್ಲೆ ಮಾಡಿದ್ದೇನೆ. ನಮಗೂ ಗಾಯವಾಗಿದೆ ಅಂತಾ ಆಸ್ಪತ್ರೆಗೆ ದಾಖಲಾಗಿ, ಚಾಲಕನ ವಿರುದ್ಧ ಆರೋಪ ಮಾಡಿದ್ದಾಳೆ.
ಒಟ್ಟಾರೆ ಘಟನೆ ಸಂಬಂಧ ಪರಸ್ಪರ ಆರೋಪ, ಪ್ರತ್ಯಾರೋಪ ಕೇಳಿ ಬರುತ್ತಿದೆ. ಆದರೆ ಘಟನೆಗೆ ನಿಜ ಕಾರಣ ಏನು ಎನ್ನುವುದು ತನಿಖೆಯಿಂದಷ್ಟೇ ಹೊರ ಬರಬೇಕಿದೆ.