ಕೊಟ್ಟಿಗೆಪಾಳ್ಯ ಬಿಎಂಟಿಸಿ ಬಸ್ ಅಪಘಾತ- ಡಿಪೋ ಮ್ಯಾನೇಜರ್, AWS ಅಮಾನತು

Public TV
2 Min Read
BMTC A

-ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
-ಮೃತ ಕುಟುಂಬಸ್ಥರಿಗೆ, ಗಾಯಾಳುಗಳಿಗೆ ಪರಿಹಾರ

ಬೆಂಗಳೂರು: ಕೊಟ್ಟಿಗೆಪಾಳ್ಯದ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಡಿಪೋ ಮ್ಯಾನೇಜರ್ ಶಿವಲಿಂಗಯ್ಯ ಮತ್ತು ಎಡಬ್ಲ್ಯೂಎಸ್ ಇಬ್ಬರನ್ನು ಅಮಾನತುಗೊಳಿಸಲಾಗಿದೆ.

ಬಸ್ ಚಾಲಕ ವೆಂಕಟೇಶ್ 15 ದಿನಗಳ ಹಿಂದೆಯೇ 250ಎಂ ಬಸ್ ಬ್ರೇಕ್ ಸರಿ ಇಲ್ಲ. ಬೇರೆ ಬಸ್ ಕೊಡಿ ಅಂತಾ ಕೇಳಿದ್ದರು. ಆದರೆ ಡಿಪೋ ಮ್ಯಾನೇಜರ್ ಚಾಲಕನ ಮಾತನ್ನು ನಿರ್ಲಕ್ಷ್ಯಿಸಿದ್ದರು. ಕಳೆದ 15 ದಿನಗಳಿಂದಲೂ ಬಸ್ ಬ್ರೇಕ್ ಸರಿ ಇಲ್ಲ ಎಂದು ಬರೆದು ವೆಂಕಟೇಶ್ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಹೀಗಾಗಿ ಅಪಘಾತಕ್ಕೆ ಡಿಪೋ ಮ್ಯಾನೇಜರ್ ಶಿವಲಿಂಗಯ್ಯ ಮತ್ತು ಎಡಬ್ಲ್ಯೂಸಿ ಕಾರಣ ಎಂದು ಇಬ್ಬರನ್ನು ಬಿಎಂಟಿಸಿ ಎಂಡಿ ಶಿಖಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

BMTC Kottogepalya Accident 4

ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದೇನೆ. ಮೇಲ್ನೋಟಕ್ಕೆ ಬ್ರೇಕ್ ಸರಿ ಇರಲಿಲ್ಲ ಎಂದು ಹೇಳಲಾಗುತ್ತಿದ್ದು, ಕರ್ತವ್ಯಲೋಪ ಕಂಡ ಹಿನ್ನೆಲೆಯಲ್ಲಿ ಈ ಕೂಡಲೇ ಡಿಪೋ ಮ್ಯಾನೇಜರ್ ಮತ್ತು ಎಡಬ್ಲ್ಯೂಎಸ್ ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದೇನೆ ಎಂದು ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ತಾತ್ಕಾಲಿಕ ಪರಿಹಾರವಾಗಿ 25 ಸಾವಿರ ರೂ. ಮತ್ತು ಗಾಯಾಳುಗಳ ಸಂಪೂರ್ಣ ವೆಚ್ಚವನ್ನ ಭರಿಸಲಾಗುತ್ತದೆ. ಪ್ರತಿ ಬಸ್ 8 ಲಕ್ಷ ಕಿಮೀ ವರೆಗೆ ಓಡಿಸಲಾಗುತ್ತದೆ. ಅಪಘಾತವಾದ ಬಸ್ 5 ಲಕ್ಷ ಕಿಮೀ ಓಡಿದೆ. ಬಸ್ ಕಂಡೀಷನ್ ಬಗ್ಗೆ ಡ್ರೈವರ್ ಗಳು ಡಿಪೋ ಮ್ಯಾನೇಜರ್ ಗೆ ಮಾಹಿತಿ ನೀಡುತ್ತಾರೆ. ಇದನ್ನ ಪರಿಗಣನೆಗೆ ತೆಗೆದುಕೊಂಡು ಕೆಲಸ ಮಾಡಬೇಕು. ಈ ಸಂಬಂಧ ಆಂತರಿಕೆ ತನಿಖೆಗೆ ಆದೇಶ ನೀಡಿದ್ದೇವೆ ಎಂದು ಎಂಟಿಸಿ ಪಶ್ಚಿಮ ವಿಭಾಗ ಡಿಸಿ ಶ್ರೀನಾಥ್ ತಿಳಿಸಿದ್ದಾರೆ.

BMTC Kottogepalya Accident 5

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ:
ಈ ಅಪಘಾತದ ದೃಶ್ಯಗಳು ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ವೇಗವಾಗಿ ಬಂದ ಬಸ್ ನಾಲ್ಕು ದ್ವಿಚಕ್ರ ವಾಹನಗಳು, ಒಂದು ಕಾರ್ ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ವಾಹನಗಳು ಸಂಪೂರ್ಣ ಜಖಂ ಆಗಿವೆ. ಬಿಎಂಟಿಸಿ ಚಾಲಕ ವೆಂಕಟೇಶ್ ಸಮಯ ಪ್ರಜ್ಞೆ ಮೆರೆದಿದ್ದಾರೆ. ರಸ್ತೆಯ ಎಡಬದಿಯಲ್ಲಿ ಬಸ್ ಸ್ಟಾಪ್ ಇದ್ದು, ಸಾಕಷ್ಟು ಜನ ನಿಂತಿದ್ದರು. ಬಲಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಲ್ಲುಗಳಿಗೆ ಬಸ್ ಡಿಕ್ಕಿ ಹೊಡಿಸಿ ನಿಲ್ಲಿಸಿದ್ದಾರೆ.

ವಾಹನ ಸವಾರರ ಮೇಲೆ ಹರಿದ ಪರಿಣಾಮ ಹರ್ಷಿತ್, ನಾಗರಾಜ್ ಮತ್ತು ಅಭಿಷೇಖ್ ಗೆ ಗಂಭೀರ ಗಾಯಗಳಾಗಿ ಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿಲ್ಲಿದ್ದ ಪ್ರಯಾಣಿಕರು, ಎಮರ್ಜೆನ್ಸಿ ಎಕ್ಸಿಟ್‍ನಿಂದ ಹೊರಬಂದಿದ್ದಾರೆ. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಇಬ್ಬರು ಸಾವನ್ನಪ್ಪಿದ್ರೆ, ಮೂವರಿಗೆ ತಲೆಗೆ ಗಾಯವಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *