ಬೆಂಗಳೂರು: ಬಿಎಂಟಿಸಿ ಬಸ್ ಚಲಾಯಿಸುತ್ತಲೇ ಚಾಲಕ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿರುವ ದೃಶ್ಯದ ವೀಡಿಯೋ ವೈರಲ್ ಆಗಿದ್ದು, ಚಾಲಕನ ನಡೆಗೆ ಜನಾಕ್ರೋಶ ವ್ಯಕ್ತವಾಗಿದೆ.
ಹೊಸೂರು ರೋಡ್ ಟು ಲಾಲ್‌ಬಾಗ್ ನಡುವೆ ಸಂಚರಿಸುವ ಬಸ್‌ವೊಂದರ ಚಾಲಕ ಟ್ರಾಫಿಕ್ ನಡುವೆ ರೀಲ್ಸ್ ನೋಡುತ್ತ ಬಸ್ ಓಡಿಸುತ್ತಿರುವ ವೀಡಿಯೋ ಸಖತ್ ವೈರಲ್ ಆಗಿದೆ. ಎರಡು ದಿನಗಳ ಹಿಂದೆ ಸಂಜೆ 5 ಗಂಟೆ ಸುಮಾರಿಗೆ ಸಂಚರಿಸುವ ವೇಳೆ ಟ್ರಾಫಿಕ್ ನಡುವೆ ಬಸ್ ಚಲಾಯಿಸುತ್ತಲೇ, ಸ್ಟೇರಿಂಗ್ ಮೇಲೆ ಮೊಬೈಲ್ ಹಿಡಿದು ರೀಲ್ಸ್ ಸ್ಕ್ರಾಲ್ ಮಾಡಿದ್ದಾನೆ. ಇದನ್ನ ಅದೇ ಬಸ್‌ನಲ್ಲಿ ಡ್ರೈವರ್ ಸೀಟಿನ ಹಿಂಬದಿ ಕುಳಿತಿದ್ದ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
Advertisement
ಇದೇ ರೀತಿ ಮತ್ತೊಬ್ಬ ಚಾಲಕನ ನಿರ್ಲಕ್ಷ್ಯದ ಚಾಲನೆ ವೀಡಿಯೋ ಕೂಡ ವೈರೆಲ್ ಆಗಿದೆ. ಇದು ಏರ್ಪೋಟ್ ಬಸ್‌ವೊಂದರ ಚಾಲಕನಿಂದಲೂ ನಿರ್ಲಕ್ಷ್ಯದ ಚಾಲನೆಯಿಂದ ಆಗಿರುವ ಘಟನೆ. ಟ್ರಾಫಿಕ್‌ನಲ್ಲಿ ನಿಂತಿದ್ದ ಕಾರ್ ಒಂದರ ಹಿಂಭಾಗಕ್ಕೆ ಡಿಕ್ಕಿ ಹೊಡೆಯುವ ಹಾಗೇ ಬಂದು ಬಸ್ ನಿಲ್ಲಿಸಿದ್ದಾನೆ. ಬಳಿಕ ಇನ್ನೇನು ಕಾರ್‌ಗೆ ಟಚ್ ಆಯ್ತು ಅನ್ನುವಷ್ಟರಲ್ಲಿ ವಾಪಸ್ ಹಿಂದಕ್ಕೆ ತೆಗೆದು ಬಸ್ ನಿಲ್ಲಿಸಿದ್ದಾನೆ. ವಾಹನ ಒಂದರ ಹಿಂದೆ ನಿಲ್ಲಿಸಬೇಕಾದ್ರೆ ಕನಿಷ್ಠ ಅಂತರವನ್ನಾದರೂ ಕಾಯಬೇಕು. ಆದರೆ ಬಿಎಂಟಿಸಿ ಬಸ್ ಚಾಲಕ ಕಂಪ್ಲೀಟ್ ಕಾರ್‌ನ ಟಚ್ ಮಾಡುವ ಹಾಗೆಯೇ ನಿಲ್ಲಿಸಿದ್ದು, ಕಾರ್ ಚಾಲಕನಿಗೆ ಕೊಂಚ ಗಾಬರಿಯನ್ನ ಉಂಟುಮಾಡಿದೆ. ಸದ್ಯ ಸಿಸಿ ಕ್ಯಾಮೆರಾದಲ್ಲಿ ಬಸ್ ಚಾಲಕನ ನಿರ್ಲಕ್ಷ್ಯ ರೆಕಾರ್ಡ್ ಆಗಿದ್ದು, ಕೆಲ ಚಾಲಕರು ಯಾಕೆ ಹೀಗೆ ಅನ್ನುವ ಪ್ರಶ್ನೆ ಕೇಳ್ತಿದ್ದಾರೆ ಸಾರ್ವಜನಿಕರು.