ಬೆಂಗಳೂರು: ಇತ್ತೀಚೆಗೆ 30 ವರ್ಷದ ಮಹಿಳೆಯೊಬ್ಬರು ಬೆಂಗಳೂರಿನಿಂದ ಐಸ್ ಲ್ಯಾಂಡ್‍ಗೆ ತೆರಳುತ್ತಿದ್ದ ವೇಳೆ ಜರ್ಮನಿಯ ಫ್ರಾಂಕ್‍ಫರ್ಟ್ ಏರ್‍ಪೋರ್ಟ್ ಸಿಬ್ಬಂದಿ ತಪಾಸಣೆಗಾಗಿ ಮಹಿಳೆಯನ್ನ ವಿವಸ್ತ್ರಗೊಳ್ಳುವಂತೆ ಹೇಳಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಡೆದಿದ್ದೇನು?: 4 ವರ್ಷದ ಮಗಳ ಜೊತೆ ಬೆಂಗಳೂರು ಮೂಲದ ಶೃತಿ ಬಸಪ್ಪ ದಂಪತಿ ಐಸ್ ಲ್ಯಾಂಡ್ ಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಜರ್ಮನಿಯ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಬರ್ಲಿನ್‍ಗೆ ವಿಮಾನ ಹತ್ತಲೆಂದು ದಂಪತಿ ಇಳಿದಿದ್ದರು. ವಿಮಾನ ನಿಲ್ದಾಣದಲ್ಲಿ ಬಾಡಿ ಸ್ಕ್ಯಾನ್ ಆದ ನಂತರವೂ ಶೃತಿ ಬಸಪ್ಪ ಅವರನ್ನು ತಡೆದ ಅಲ್ಲಿನ ಸಿಬ್ಬಂದಿ ಪಕ್ಕಕ್ಕೆ ಕರೆದುಕೊಂಡು ಹೋಗಿ ಬಟ್ಟೆ ತೆಗೆಯುವಂತೆ ಹೇಳಿದ್ದಾರೆ. ಈ ಬಗ್ಗೆ ಶೃತಿ ಫ್ರಾಂಕ್‍ಫರ್ಟ್ ಏರ್ಪೋಟ್‍ನ ಫೆಸ್‍ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಿ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.
Advertisement
Advertisement
ನನ್ನ ಪತಿ ಐಸ್‍ಲ್ಯಾಂಡ್ ಪ್ರಜೆಯಾಗಿದ್ದು, ನನ್ನ ಬಳಿ ಭಾರತದ ಪಾಸ್‍ಪೋರ್ಟ್ ಇತ್ತು. ಇತ್ತೀಚೆಗೆ ಭಾರತಕ್ಕೆ ಬಂದಿದ್ದ ನಾವು ಮತ್ತೆ ಐಸ್‍ಲ್ಯಾಂಡ್‍ಗೆ ತೆರಳುತ್ತಿದ್ದೆವು. ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಸಿಬ್ಬಂದಿ ನನ್ನನ್ನು ತಪಾಸಣೆಗಾಗಿ ಪಕ್ಕಕ್ಕೆ ಸರಿಯುವಂತೆ ಹೇಳಿದ್ರು. ನನ್ನನ್ನು ಒಂದು ಕೊಠಡಿಗೆ ಕರೆದುಕೊಂಡು ಹೋಗಿ 4 ವರ್ಷದ ಮಗಳ ಎದುರೇ ವಿವಸ್ತ್ರಗೊಳ್ಳುವಂತೆ ಹೇಳಿದ್ರು. ಇದಕ್ಕೆ ಯಾವುದೇ ವಿವರಣೆ ನೀಡಲಿಲ್ಲ.
Advertisement
ಮೊದಲು ಲೋಹ ಶೋಧಕದಿಂದ ತಪಾಸಣೆ ಮಾಡಿದ್ರು. ಈ ವೇಳೆ ನನಗೆ ಹೊಟ್ಟೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ, ನಿಧಾನವಾಗಿ ತಪಾಸಣೆ ಮಾಡಿ ಅಂತಾ ಪ್ರಮಾಣ ಪತ್ರ ತೋರಿಸಿದೆ. ಆದ್ರೆ ಅದನ್ನ ಅವರ ಕೇಳಲೇ ಇಲ್ಲ. ಕೊನೆಗೆ ಸಿಬ್ಬಂದಿ ಮಹಿಳೆಯೊಬ್ಬರು ನನ್ನ ಮೇಲೆ ಕಿರುಚಾಡಲು ಶುರು ಮಾಡಿದ್ರು. ನಂತರ ಆಕೆ ಮೇಲ್ವಿಚಾರಕಿಯನ್ನು ಕರೆದುಕೊಂಡು ಬಂದ್ರು. ಅವರೂ ಕೂಡ ನನಗೆ ಹೇಗೆ ಬಟ್ಟೆ ತೆಗೆಯಬೇಕು ಅಂತ ಹೇಳಿದ್ರು. ನಿಜವಾಗಲೂ ಈ ರೀತಿಯ ನಿಯಮ ಇದೆಯೇ. ಇಲ್ಲಿ ಜನಾಂಗೀಯ ವಿಚಾರ ತರಲು ನನಗೆ ಇಷ್ಟವಿಲ್ಲ. ಆದ್ರೆ ಸಾಲಿನಲ್ಲಿದ್ದವರ ಪೈಕಿ ನನ್ನನ್ನು ಮಾತ್ರ ಪಕ್ಕಕ್ಕೆ ಎಳೆದರು. ನನ್ನ ಪತಿಯ ಮುಖ ನೋಡಿದ ಮೇಲೆ ಸಾಮಾನ್ಯ ತಪಾಸಣೆ ಮಾಡಿದ್ರು. ಈ ಬಗ್ಗೆ ನನಗೆ ನಿಮ್ಮಿಂದ ಆದಷ್ಟು ಬೇಗ ಉತ್ತರ ಬೇಕು ಎಂದು ಶೃತಿ ಪೋಸ್ಟ್ ಮಾಡಿದ್ದರು.
Advertisement
ಈ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುವಂತೆ ಫ್ರಾಂಕ್‍ಫರ್ಟ್ ಟಮಿರ್ನಲ್‍ನ ಅಕೌಂಟ್‍ನಿಂದ ಕೇಳಲಾಗಿದೆ. ಆದರೂ ಈ ಬಗ್ಗೆ ಮತ್ತೊಮ್ಮೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರೋ ಶೃತಿ, ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದ ಅಧಿಕಾರಿಗಳು ದೂರು ನೀಡಿದ್ದೇನೆ. ಎರಡು ದಿನಗಳಾದ್ರೂ ಅವರಿಂದ ಯಾವುದೇ ಉತ್ತರವಿಲ್ಲ ಅಂತ ಹೇಳಿದ್ದಾರೆ.
ಈ ಬಗ್ಗೆ ಶೃತಿ ವಿಮಾನ ನಿಲ್ದಾಣದಲ್ಲೂ ದೂರು ದಾಖಲಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಜರ್ಮನ್‍ನಲ್ಲಿರುವ ದೂತವಾಸದ ಅಧಿಕಾರಿಗಳ ವಿವರ ಕೇಳಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆ ನಡೆಸುವಂತೆಯೂ ಸೂಚಿಸಿದ್ದಾರೆ ಎಂದು ವರದಿಯಾಗಿದೆ.