ಹೈದರಾಬಾದ್: ದೇಶಾದ್ಯಂತ ಬ್ಲೂ ವೇಲ್ ಗೇಮ್ ಚಾಲೆಂಜ್ ಕುರಿತು ಎಷ್ಟೇ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದರು, ಈ ಗೇಮ್ ಗೆ ಮತ್ತೊಬ್ಬ ಯುವಕ ಬಲಿಯಾಗಿರುವ ಸಂಶಯಾಸ್ಪದ ಘಟನೆ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ನಲ್ಲಿ ನಡೆದಿದೆ.
ನಗರದ 19 ವರ್ಷದ ಯುವಕನೊಬ್ಬ ಬ್ಲೂ ವೇಲ್ ಗೇಮ್ ಚಟಕ್ಕೆ ಬಿದ್ದು, ತನ್ನ ಮುಖವನ್ನು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಟಿ.ವರುಣ್ ಎಂದು ತಿಳಿದು ಬಂದಿದೆ. ವರುಣ್ ನಗರದ ಹೊರವಲಯದ ಗಾಂಡಿಪೇಟ್ ಬಳಿಯ ಮ್ಯಾಪಲ್ ಟೌನ್ ವಿಲ್ಲಾಸ್ ನಲ್ಲಿ ಕುಟುಂಬದೊಂದಿಗೆ ವಾಸವಿದ್ದನು.
ಮೃತ ವರುಣ್ ತಂದೆ ಶನಿವಾರ ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ವರುಣ್ ಬಿ.ಟೆಕ್ ವಿದ್ಯಾರ್ಥಿಯಾಗಿದ್ದು, ಎಲ್ಲರೊಂದಿಗೂ ಉತ್ತಮವಾಗಿ ಮಾತನಾಡಿಕೊಂಡು ಸಾಮಾನ್ಯವಾಗಿದ್ದ, ಆದರೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಎಸ್ಪಿ ಉಮೇಂದರ್, ವರುಣ್ ಬ್ಲೂ ವೇಲ್ ಗೇಮ್ ಚಾಲೆಂಜ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಅನುಮಾನ ವ್ಯಕ್ತ ಪಡಿಸಿದ್ದು, ಆತ ಬಳಕೆ ಮಾಡುತ್ತಿದ್ದ ಲ್ಯಾಪ್ ಟಾಪ್ ಅನ್ನು ವಶಕ್ಕೆ ಪಡೆಯಲಾಗಿದೆ. ಇದರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಬ್ಲೂ ವೇಲ್ ಗೇಮ್ ಕುರಿತು ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸಲು ಪೋಷಕರು ಹಾಗೂ ಶಾಲೆಗಳಲ್ಲಿ ಮನವಿ ಮಾಡಿದ್ದರು.