ರಾಮನಗರ: ರಾಜ್ಯ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇದೆ. ಇದರ ನಡುವೆಯೇ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಅಂತಿಮ ಕಸರತ್ತು ನಡೆಸಿದೆ. ರಾಮಜಪ ಮಾಡುವ ಮೂಲಕ ಹಿಂದೂಮತಗಳ ಕ್ರೋಢೀಕರಿಸಲು ತಂತ್ರ ರೂಪಿಸಿರೋ ಬಿಜೆಪಿ ಶೀಘ್ರದಲ್ಲೇ ರಾಮಮಂದಿರ (Ram Mandir) ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲು ಮುಂದಾಗಿದೆ. ರಾಮದೇವರ ಬೆಟ್ಟ ಅಭಿವೃದ್ಧಿ ಸಂಬಂಧ ನೀಲ ನಕ್ಷೆ ಸಿದ್ದಪಡಿಸಿ 40 ಲಕ್ಷ ಅನುದಾನ ಘೋಷಣೆ ಮಾಡಿದೆ.
2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇನ್ನೆರಡು-ಮೂರು ದಿನಗಳಲ್ಲಿ ನೀತಿಸಂಹಿತೆ ಜಾರಿಯಾಗಲಿದ್ದು, ಇದಕ್ಕೂ ಮುನ್ನವೇ ರಾಮಮಂದಿರದ ಶಂಕುಸ್ಥಾಪನೆ ಮಾಡಲು ಬಿಜೆಪಿ ಸಿದ್ಧತೆ ನಡೆಸಿದೆ. ರಾಮನಗರದಲ್ಲಿ (Ramanagara) ರಾಮಮಂದಿರ ನಿರ್ಮಾಣ ಮಾಡಿ ದಕ್ಷಿಣ ಅಯೋಧ್ಯೆಯನ್ನಾಗಿ ರಾಮದೇವರ ಬೆಟ್ಟ ಅಭಿವೃದ್ಧಿಗೊಳಿಸುವುದಾಗಿ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ನಿನ್ನೆಯಷ್ಟೇ ರಾಮನಗರಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ ರಾಮನ ಇತಿಹಾಸ ಮತ್ತು ಖ್ಯಾತಿಯನ್ನ ಮರುಸೃಷ್ಠಿ ಮಾಡುತ್ತೇವೆ. ರಾಮಮಂದಿರ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ದೇವಾಲಯ ಅಭಿವೃದ್ಧಿ ಸಂಬಂಧ ಬ್ಲೂ ಪ್ರಿಂಟ್ ಸಿದ್ಧಪಡಿಸಿರೋ ಸರ್ಕಾರ 40 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಬಸ್ ಮೇಲಿಂದ ಕಲಾವಿದರಿಗೆ ಹಣ ಎಸೆದ ಡಿಕೆಶಿ
ರಾಮದೇವರ ಬೆಟ್ಟದ ಮೇಲಿರುವ ಒಟ್ಟು 19 ಎಕರೆ ವ್ಯಾಪ್ತಿಯಲ್ಲಿ ಮಂದಿರ ನಿರ್ಮಾಣಕ್ಕೆ ಫ್ಲಾನ್ ರೆಡಿಯಾಗಿದ್ದು, ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಬೆಟ್ಟದ ಮೇಲೆ ಸಾಲುಮಂಟಪ, ಬೃಹತ್ ಗೋಪುರ, ಸುಸಜ್ಜಿತ ಮೆಟ್ಟಿಲು, ಶಿವದೇವಾಲಯ, ಆಂಜನೇಯ ದೇವಾಲಯ, ವ್ಯೂವ್ ಪಾಯಿಂಟ್‌ಗಳನ್ನ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಇದರ ಜೊತೆಗೆ ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್ ಸೇರಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಇಡೀ ಯೋಜನೆಗೆ 120 ಕೋಟಿ ಖರ್ಚಾಗಲಿದ್ದು ಸದ್ಯ ಆರಂಭಿಕ ಹಂತದಲ್ಲಿ 40 ಲಕ್ಷ ರೂ.ಗಳನ್ನ ಸರ್ಕಾರ ಬಿಡುಗಡೆ ಮಾಡಿದೆ. ಈ ಸಂಬಂಧ ಮಾತನಾಡಿರೋ ಉಸ್ತುವಾರಿ ಸಚಿವ ಡಾ.ಅಶ್ವಥ್ ನಾರಾಯಣ್ ಶೀಘ್ರದಲ್ಲೇ ಮುಜರಾಯಿ ಇಲಾಖೆ ಹಾಗೂ ಮುಖ್ಯಮಂತ್ರಿಗಳ ಅನುಮತಿ ಪಡೆದು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ನೀತಿಸಂಹಿತೆ ಜಾರಿಯಾಗುವ ಸಾಧ್ಯತೆ ಇದ್ದು, ಅಷ್ಟರಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಬಿಜೆಪಿ ತುದಿಗಾಲಿನಲ್ಲಿ ನಿಂತಿದೆ. ಈ ಮೂಲಕ ಜಿಲ್ಲೆಯಲ್ಲಿರುವ ಹಿಂದೂ ಮತಗಳ ಕ್ರೂಢೀಕರಣ ಮಾಡಿ ಜೆಡಿಎಸ್‌ಗೆ ಟಕ್ಕರ್ ಕೊಡಲು ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ತಂತ್ರಗಾರಿಕೆ ರೂಪಿಸಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕರೆಸಿ ಶಂಕುಸ್ಥಾಪನೆ ಮಾಡಲು ಪ್ಲಾನ್ ಮಾಡಿದ್ದಾರೆ. ರಾಮಜಪ ಮಾಡುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಿಸುವ ತಂತ್ರ ಹೆಣೆದಿದ್ದಾರೆ. ಇದನ್ನೂ ಓದಿ: ಗಾಂಜಾ ಕೇಸ್‌ನಲ್ಲಿ ಗಂಡ – ಹೆಂಡತಿ ಜೈಲುಪಾಲು ; ದಂಧೆಗೆ ತನ್ನ ಮಕ್ಕಳನ್ನೇ ಬಳಸಿಕೊಳ್ತಿದ್ದ ಖತರ್ನಾಕ್ ಲೇಡಿ
ರೇಷ್ಮೆನಾಡು ರಾಮನಗರದಲ್ಲಿ ಈ ಬಾರಿ ಅಭಿವೃದ್ಧಿ ರಾಜಕಾರಣಕ್ಕಿಂತ, ಧರ್ಮ ರಾಜಕಾರಣ ಜೋರಾಗಿದೆ. ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಹಲವು ರಾಜಕೀಯ ತಿರುವಿಗೆ ಸಾಕ್ಷಿಯಾಗುತ್ತದೆ. ಆದರೆ ಮತದಾರ ಪ್ರಭು ಯಾರಿಗೆ ಮಣೆ ಹಾಕ್ತಾರೆ ಎಂಬುದನ್ನ ಕಾದುನೋಡಬೇಕಿದೆ.