ಬೆಂಗಳೂರು: ಸೆಪ್ಟೆಂಬರ್ 7ರಂದು ಸಂಪೂರ್ಣ ರಕ್ತಚಂದ್ರಗ್ರಹಣ (Blood Moon Eclipse 2025) ಸಂಭವಿಸಲಿದೆ. ನಭೋಮಂಡಲದ ಈ ವಿಸ್ಮಯದ ಬಗ್ಗೆ ವಿಜ್ಞಾನಿಗಳು (Scientists) ಕಾತುರದಿಂದ ನೋಡುತ್ತಿದ್ದಾರೆ. ಈ ಬಗ್ಗೆ ವಿಜ್ಞಾನಿಗಳು ಮಾತನಾಡಿದ್ದಾರೆ.
ಏನಿದು ಚಂದ್ರಗ್ರಹಣ?
ಚಂದ್ರಗ್ರಹಣ ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ನಿಖರವಾಗಿ ಬಂದಾಗ ಸಂಭವಿಸುತ್ತದೆ. ಭೂಮಿಯ ನೆರಳು ಕೆಲ ಕಾಲ ಚಂದಿರನ ಮೇಲೆ ಬೀಳುವುದರಿಂದ ಅದು ಮರೆಯಾಗುತ್ತದೆ. ಭೂಮಿಯ ನೆರಳಿನಲ್ಲಿ ಎರಡು ಭಾಗ ಇದೆ. ಒಂದು ಗಾಢ ಕತ್ತಲೆಯ ಭಾಗ, ಇದನ್ನು ಅಂಬ್ರಾ ಎನ್ನಲಾಗುತ್ತದೆ. ಹೊರಗಿನ ಮಬ್ಬಾದ ಭಾಗವನ್ನು ಪೆನಾಂಬ್ರಾ ಎನ್ನಲಾಗುತ್ತದೆ. ಚಂದ್ರನು ಸಂಪೂರ್ಣವಾಗಿ ಅಂಬ್ರಾ ನೆರಳಿನೊಳಗೆ ಪ್ರವೇಶಿಸುವಾಗ ಸಂಪೂರ್ಣವಾಗಿ ಚಂದ್ರ ತಾಮ್ರವರ್ಣದ ಅಥವಾ ಗಾಢ ಕೆಂಪುಬಣ್ಣದಲ್ಲಿ ಕಾಣಿಸುತ್ತಾನೆ. ಇದನ್ನೂ ಓದಿ: ಸೆ.7 ರಕ್ತಚಂದ್ರಗ್ರಹಣ – ಗರ್ಭಿಣಿಯರು ಏನು ಮಾಡಬೇಕು? ತಜ್ಞ ವೈದ್ಯರ ಸಲಹೆಗಳೇನು?
ಈ ಪ್ರಕ್ರಿಯೆ ಯಾವಾಗ ಆರಂಭ?
ಸೆಪ್ಟೆಂಬರ್ 7ರಂದು ರಾತ್ರಿ 9:57ಕ್ಕೆ ಚಂದ್ರ ಭೂಮಿಯ ಗಾಢ ನೆರಳಾದ ಅಂಬ್ರಾ ಒಳಗೆ ಪ್ರವೇಶಿಸಲು ಆರಂಭಿಸುತ್ತಾನೆ. ನಂತರ ಚಂದ್ರ ಹೆಚ್ಚಿನ ಭಾಗ ಭೂಮಿಯ ನೆರಳಿನಿಂದ ಅವರಿಸಲ್ಪಡಿಸುತ್ತಾ 11:01ಕ್ಕೆ ಸಂಪೂರ್ಣವಾಗಿ ಅಂಬ್ರಾದೊಳಗೆ ಸೇರುತ್ತದೆ. ಸಂಪೂರ್ಣ ಚಂದ್ರಗ್ರಹಣ 82 ನಿಮಿಷದವರೆಗೆ ಅಂದರೆ 12:23ರವರೆಗೆ ಮುಂದುವರೆಯಲಿದೆ. ಪಾರ್ಶ್ವ ಹಂತವು 1:26ರವರೆಗೆ ಮುಂದುವರೆಯಲಿದೆ. ಪಾರ್ಶ್ವಛಾಯ ಹಂತ ರಾತ್ರಿ 8:58ಕ್ಕೆ ಆರಂಭವಾಗಿ ಬೆಳಗಿನ ಜಾವ 2:25ಕ್ಕೆ ಅಂತ್ಯಗೊಳ್ಳುತ್ತದೆ.
ವೀಕ್ಷಣೆ ಹೇಗೆ?
ಚಂದ್ರಗ್ರಹಣ ವೀಕ್ಷಣೆಗೆ ಯಾವ ಸಾಧನ ಬೇಕಾಗಿಲ್ಲ, ಬರಿಗಣ್ಣಿನಲ್ಲಿ ನೋಡಬಹುದು. ಆದರೆ ದೂರದರ್ಶಕ, ದುರ್ಬಿನು ಬಳಸಿದರೆ ಇನ್ನಷ್ಟು ವೀಕ್ಷಣೆಯ ಅನುಭವ ಸುಂದರವಾಗುತ್ತದೆ.
ವೀಕ್ಷಣೆಗೆ ಸ್ಥಳದ ಆಯ್ಕೆ ಹೇಗಿರಬೇಕು?
ಗ್ರಹಣದ ಸಮಯ ತಡರಾತ್ರಿಯಾಗಿರೋದ್ರಿಂದ ತಮ್ಮ ಮನೆಗಳ ಹೊರಾಂಗಣ ಅಥವಾ ತಾರಸಿಗಳಲ್ಲಿ ವೀಕ್ಷಣೆ ಮಾಡಬಹುದು. ಮೋಡವಿದ್ದರೂ ಕೆಲಕಾಲ ಸ್ಪಷ್ಟವಾಗಿ ಕಾಣಿಸುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಅನೇಕ ಸಂಸ್ಥೆಗಳಿಂದ ಗ್ರಹಣ ವೀಕ್ಷಣೆಗೆ ಸಿದ್ಧತೆ ನಡೆಸಲಾಗುತ್ತಿದೆ.