ಬೆಂಗಳೂರು: ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಏ.27 ರಂದು ಅಂಧ ದಂಪತಿಯ ಮಗು ಕಿಡ್ನಾಪ್ ಆಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯೊಬ್ಬರು ಮಗುವನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ.
ರಾಯಚೂರಿನ ರಾಯದುರ್ಗಾ ಮೂಲದ ಬಸವರಾಜು, ಚಿನ್ನು ದಂಪತಿಯ ಎಂಟು ತಿಂಗಳ ಮಗು ಸಾಗರ್‍ನನ್ನು ಮಹಿಳೆಯೊಬ್ಬಳು ಸಹಾಯ ಮಾಡುವ ನೆಪದಲ್ಲಿ ಕಿಡ್ನಾಪ್ ಮಾಡಿದ್ದಳು. ಮಗು ಕಳೆದುಕೊಂಡ ಬಗ್ಗೆ ದಂಪತಿ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಕೂಡ ವರದಿ ಮಾಡಿತ್ತು.
ಈ ನಡುವೆಯೇ ನಗರದ ಕೆಂಗೇರಿ ನಿವಾಸಿ ಪಾರ್ವತಮ್ಮ ಎಂಬವರು ಮಗು ಸಾಗರ್‍ನನ್ನು ಇಂದು ಉಪ್ಪಾರಪೇಟೆ ಪೊಲೀಸ್ ಠಾಣೆ ತಂದು ಒಪ್ಪಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ, ಈ ಮಗು ನಮಗೆ ಎರಡು ದಿನದ ಹಿಂದೆ ಇದೇ ಮೆಜೆಸ್ಟಿಕ್ ಬಳಿ ಬಸ್‍ಗೆ ಕಾಯುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಕೊಟ್ಟರು. ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿದ ಕಾರಣ ನಾನು ಮಗುವನ್ನು ನೋಡಿಕೊಳ್ಳಲು ಒಪ್ಪಿದೆ. ಆದರೆ ಆ ಬಳಿಕ ಮಹಿಳೆ ಎಷ್ಟು ಸಮಯ ಕಾದರು ಬರಲಿಲ್ಲ. ಏನು ಮಾಡುವುದೆಂದು ತಿಳಿಯದೇ ಮಗುವನ್ನು ಮನೆಗೆ ತೆಗೆದುಕೊಂಡು ಬಂದು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೆ. ಮಾಧ್ಯಮಗಳಲ್ಲಿ ಮಗುವಿನ ಸುದ್ದಿ ಪ್ರಸಾರ ವೇಳೆ ನನಗೆ ಇದರ ಅರಿವಾಗಿದ್ದು, ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ಸದ್ಯ ಮಗು ಸಿಕ್ಕಿರುವುದಿಂದ ಪ್ರಕರಣವನ್ನು ಕೈ ಬಿಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಮಗು ಅಪಹರಣ ಹಿಂದಿನ ಮಹಿಳೆ ಯಾರು? 3 ದಿನಗಳ ಬಳಿಕ ಮಗು ಪತ್ತೆಯಾದ ಹಿಂದಿನ ಘಟನೆ ಬಗ್ಗೆ ಹಲವು ಅನುಮಾನಗಳು ಇರುವ ಕಾರಣ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದುಕೊಂಡಿದ್ದ ಮಗು ಮತ್ತೆ ತಾಯಿಯ ಮಡಿಲು ಸೇರಿದ್ದರಿಂದ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.