ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ಸಮೀಪದ ಕುಗ್ರಾಮ ಗುಡ್ನಳ್ಳಿ ಗ್ರಾಮದ ಅಂಧ ಯುವತಿ ಹಾಗೂ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ರಕ್ಷಿತಾ ರಾಜು ಭಾರತದಲ್ಲೇ ಸಿಗದಂತಹಾ 5,500 ರೂ. ಮೌಲ್ಯದ ಅಪರೂಪದ ಉಡುಗೊರೆಯನ್ನು ಪ್ರಧಾನಿ ಮೋದಿಗೆ ನೀಡಿದ್ದಾರೆ. ಅಂಧ ಯುವತಿಯಿಂದ ಉಡುಗೊರೆ ಸ್ವೀಕರಿಸಿದ ಪ್ರಧಾನಿ ಮೋದಿ ಖುಷಿ ಪಟ್ಟು ಪ್ಯಾರಾ ಒಲಿಂಪಿಕ್ಸ್‌ನಲ್ಲೂ ಚಿನ್ನ ಗೆಲ್ಲುವಂತೆ ಹಾರೈಸಿದ್ದಾರೆ.
ರಕ್ಷಿತಾ ರಾಜು ಅಂಧ ಯುವತಿ. ಕಣ್ಣು ಕಾಣೋದಿಲ್ಲ. ಮೋದಿ ಹೇಗಿದ್ದಾರೆಂದೂ ಗೊತ್ತಿಲ್ಲ. ಆದರೂ ಮೋದಿ ಅನ್ನೋ ಹೆಸರಿಗೆ ಅವರನ್ನು ಭೇಟಿ ಮಾಡಿ ಖುಷಿಪಟ್ಟಿದ್ದಾರೆ. ಕಳೆದ ತಿಂಗಳು ಚೀನಾದ ಹಾಂಗೌಜ್‌ನಲ್ಲಿ ನಡೆದ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ರಕ್ಷಿತಾ ರಾಜು ಚಿನ್ನದ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದರು. ಕ್ರೀಡಾಕೂಟ ಮುಗಿದು ದೇಶಕ್ಕೆ ವಾಪಸ್ ಬಂದ ಬಳಿಕ ಕೇಂದ್ರ ಸರ್ಕಾರ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಕ್ಷಿತಾ ರಾಜು ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಉಡುಗೊರೆ ನೀಡಿ ಖುಷಿಪಟ್ಟಿದ್ದಾರೆ.
ರಕ್ಷಿತಾ ನೀಡಿದ ಉಡುಗೊರೆ ಏನು?
ಭಾರತದಲ್ಲೇ ಸಿಗದಂತಹ ಉಡುಗೊರೆ ಅಂದರೆ ಅದೆಂತಹಾ ಉಡುಗೊರೆ ಎಂದು ಅನುಮಾನ ಬರಬಹುದು. ಅದು ಅಂಧ ಕ್ರೀಡಾಪಟಗಳು ಓಡುವಾಗ ಹಾಕಿಕೊಳ್ಳುವ ಟಿಟ್ಟರ್. ಅದು ಭಾರತದಲ್ಲಿ ಸಿಗುವುದಿಲ್ಲ. ಅದನ್ನು ರಕ್ಷಿತಾ ರಾಜು ಚೀನಾದಿಂದ ತಂದಿದ್ದರು. ಅದನ್ನು ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಸಮಿತಿ ಸರ್ಟಿಫೈ ಮಾಡಿರುತ್ತದೆ. ಅದೇ ಟಿಟ್ಟರ್ ಧರಿಸಿ ರಕ್ಷಿತಾ ರಾಜು 2018ರಲ್ಲೂ ಚಿನ್ನದ ಪದಕ ಗೆದ್ದಿದರು. ಈಗಲೂ ಚಿನ್ನದ ಪದಕ ಗೆದ್ದಿದ್ದಾರೆ. ಇದರ ಬೆಲೆ 5,500 ರೂ. ತಾನು ಓಡಿ 2 ಚಿನ್ನದ ಪದಕ ಗೆದ್ದ ಅಪರೂಪದ ಟಿಟ್ಟರ್ ಅನ್ನು ರಕ್ಷಿತಾ ರಾಜು ಪ್ರಧಾನಿ ಭೇಟಿ ವೇಳೆ ಮೋದಿಗೆ ನೀಡಿ ಖುಷಿಪಟ್ಟಿದ್ದಾರೆ. ಮೋದಿ ಕೂಡ ಸಂತಸಗೊಂಡಿದ್ದಾರೆ.
ಟಿಟ್ಟರ್ ಹೇಗೆ ಕೆಲಸ ಮಾಡುತ್ತೆ?
ಟಿಟ್ಟರ್ ಅಂದ್ರೆ ಅದೊಂದು ಮಾದರಿ ಹಗ್ಗದಂತೆ. ಅಂಧ ಓಟಗಾರರಿಗೂ ಹಾಗೂ ಅವರ ಜೊತೆ ಓಡುವವರಿಗೂ ಈ ಟಿಟ್ಟರ್ ಸಹಾಯ ಮಾಡುತ್ತೆ. ಅದು ಇಷ್ಟೆ ಉದ್ದ, ಇಷ್ಟೆ ಅಗಲ. ಇಷ್ಟೆ ದಪ್ಪ ಇರಬೇಕೆಂಬ ಹತ್ತಾರು ನಿಯಮಗಳಿವೆ. ಅದೇ ರೀತಿ ಈ ಟಿಟ್ಟರ್ ಇರಬೇಕು. ಅಂಧರ ಜೊತೆ ಓಡುವವರು ತಮ್ಮ ಕೈಗೆ ಹಾಕಿಕೊಂಡು ಅವರು ಓಡುವಂತೆಯೇ ಇವರು ಓಡಬೇಕು. ಅವರನ್ನು ಮುಟ್ಟುವಂತಿಲ್ಲ. ಎಳೆದುಕೊಂಡು ಓಡುವಂತಿಲ್ಲ. ಅಂಧರಿಗಿಂತ ಇವರೇ ಮೊದಲು ಓಡುವಂತಿಲ್ಲ. ಹೀಗೆ ಹತ್ತಾರು ನಿಯಮಗಳ ಮಧ್ಯೆ ಅಂಧ ಓಟಗಾರರು ಹಾಗೂ ಜೊತೆ ಓಟಗಾರರ ಮಧ್ಯೆ ಸಮಯೋಚಿತವಾಗಿ ಓಡಲು ಈ ಟಿಟ್ಟರ್ ಸಹಾಯ ಮಾಡುತ್ತೆ. ಅದನ್ನು ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಸ್ ಸಮಿತಿ ಸರ್ಟಿಫೈ ಮಾಡಿರುತ್ತೆ. ಅದನ್ನೇ ಧರಿಸಬೇಕು. ಅಂಧ ಓಟಗಾರರ ಓಟಕ್ಕೆ ಈ ಟಿಟ್ಟರ್ ಇಲ್ಲ ಅಂದ್ರೆ ಅವರಿಗೆ ಓಡಲು ಅವಕಾಶ ನೀಡುವುದಿಲ್ಲ. ಅಂತಹಾ ಟಿಟ್ಟರ್ ಅನ್ನು ರಕ್ಷಿತಾ ರಾಜು ಪ್ರಧಾನಿ ಮೋದಿಗೆ ಉಡುಗೊರೆ ನೀಡಿದ್ದಾರೆ. ಇದನ್ನೂ ಓದಿ: ಚಿಣ್ಣರ ಬಿಂಬ ಸಾಂಸ್ಕೃತಿಕ ಸಂಸ್ಥೆ ಮುಡಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ರಕ್ಷಿತಾ ರಾಜು ಯಾರು? ಎಲ್ಲಿಯವರು?
ಛಲಕ್ಕೆ ಮತ್ತೊಂದು ಹೆಸರೇ ರಕ್ಷಿತಾ ರಾಜು. ಸಾಧಿಸುವ ಛಲವೊಂದಿದ್ದರೆ ಅಂಗವಿಕಲತೆ ತೃಣಕ್ಕೆ ಸಮ ಅನ್ನೋದಕ್ಕೆ ಈ ರಕ್ಷಿತಾ ರಾಜು ಜೀವಂತ ಸಾಕ್ಷಿ. ಆತ್ಮ ವಿಶ್ವಾಸವೊಂದಿದ್ದರೆ ಸಾಧನೆಗೆ ಅಂಗವಿಕಲತೆ ಕಾರಣವಲ್ಲ ಅನ್ನೋದನ್ನು ಈಕೆ ಸಾಬೀತು ಮಾಡಿದ್ದಾರೆ. ರಕ್ಷಿತಾ ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ಸಮೀಪದ ಗುಡ್ನಳ್ಳಿಯವರು. ಹುಟ್ಟಿನಿಂದಲೇ ಕಣ್ಣು ಕಾಣಿಸದ ಈಕೆ ಅಂಗವಿಕಲತೆಯನ್ನು ಮೆಟ್ಟಿ ನಿಂತು ಸಾಧಿಸಬಲ್ಲೆ ಎಂಬ ಛಲದಿಂದ ಇಂದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕಳೆದ ತಿಂಗಳು ಚೀನಾದ ಹಾಂಗೌಜ್‌ನಲ್ಲಿ ನಡೆದ 4ನೇ ಏಷ್ಯನ್ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ 1,500 ಮೀ ಓಟವನ್ನು 5 ನಿಮಿಷ 21.45 ಸೆಕೆಂಡಿನಲ್ಲಿ ಓಡಿ ಚಿನ್ನ ಗೆದ್ದು ಕಾಡಂಚಿನ ಕುಗ್ರಾಮ ಗಡ್ನಳ್ಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದಾರೆ. ಈ ಯುವತಿ ಗುಡ್ನಳ್ಳಿಯ ರಾಜು-ಗೀತಾ ಪುತ್ರಿ. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡ ಈಕೆ ಮಾತು ಬಾರದ ಅಜ್ಜಿ ಲಲಿತಮ್ಮಳ ಆಶ್ರಯದಲ್ಲಿ ಬೆಳೆದು ಅಂಗವಿಕಲತೆ ಮೆಟ್ಟಿ ನಿಂತರು. ಅಜ್ಜಿಯ ಸಹಕಾರದಲ್ಲಿ ಬೆಳೆದು ಇಂದು ದೇಶಕ್ಕೆ ಹೆಮ್ಮೆಯ ಯುವತಿಯಾಗಿದ್ದಾರೆ.
ಶಾಲೆಯಲ್ಲಿ ಓದಿಸೋದು ಕಷ್ಟವಾಗಿತ್ತು:
ಕಣ್ಣು ಕಾಣದ ರಕ್ಷಿತಾಗೆ ಅಜ್ಜಿ ಸಬಲೆಯಾಗಿಸಲು ಚಿಕ್ಕಂದಿನಿಂದಲೇ ಹೋರಾಡಿದ್ದಾರೆ. ಪ್ರಾಥಮಿಕ ಶಿಕ್ಷಣಕ್ಕೆ ಬಾಳೂರು ಸಮೀಪದ ವಾಟೇಕಾನ್ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿಸಿದ್ದರು. ಆದರೆ ಆಕೆಗೆ ಕಣ್ಣು ಕಾಣದ ಕಾರಣ ಆ ಶಾಲೆಯಲ್ಲಿ ಅಂಧತ್ವದ ಮಕ್ಕಳಿಗೆ ಕಲಿಸುವುದು ಕಷ್ಟವಾಗಿತ್ತು. ಆಕೆಗೆ ಎರವಲು ಮಾರ್ಗದರ್ಶನದ ಅಗತ್ಯತೆಯನ್ನು ಮನಗಂಡ ಅದೇ ಶಾಲೆ ಶಿಕ್ಷಕಿ ಸಿಂತಿಯಾ ಪಾಯ್ಸ್ ರಕ್ಷಿತಾಳನ್ನು ಚಿಕ್ಕಮಗಳೂರಿನ ಕೆಂಪನಹಳ್ಳಿಯ ಅಂಧ ಮಕ್ಕಳ ಆಶಾಕಿರಣ ಶಾಲೆಗೆ ಸೇರಿಸಿದರು. ಅಲ್ಲಿಂದ ರಕ್ಷಿತಾಳ ಕತ್ತಲೆಯೊಳಗಿನ ಬೆಳಕಿನ ಬದುಕು ಆರಂಭವಾಗಿತ್ತು. ಪ್ರಾಥಮಿಕ ಶಿಕ್ಷಣ ಮುಗಿಸುವುದರ ಜೊತೆ ಕ್ರೀಡಾಸಕ್ತಿಯನ್ನೂ ಬೆಳೆಸಿಕೊಂಡ ರಕ್ಷಿತಾಗೆ ದೈಹಿಕ ಶಿಕ್ಷಕ ಪಿ ಮಂಜು ಆಕೆಯ ಆಸಕ್ತಿ ಹಾಗೂ ಸಾಧನೆಯ ಬೆನ್ನಿಗೆ ನಿಂತರು. ಆಕೆಯ ಸಾಧನೆ ಗುರುತಿಸಿದ ಶಿಕ್ಷಕರು ರಕ್ಷಿತಾಳನ್ನು ಬೆಂಗಳೂರಿನ ರೈಲ್ವೆ ಉದ್ಯೋಗಿ, ಕ್ರೀಡಾ ತರಬೇತುದಾರ ರಾಹುಲ್ ಬಾಲಕೃಷ್ಣ ಹಾಗೂ ಸಹಾಯಕ ಕೋಚ್ ಸೌಮ್ಯ ಮತ್ತು ಗೈಡ್ ರನ್ನರ್ಸ್ ಗೋವಿಂದ್, ತಬರೇಶ್ ಬಳಿ 2014 ರಲ್ಲಿ ತರಬೇತಿಗೆ ಕಳಿಸಿದ್ದರು.
2017ರಿಂದ ಪದಕಗಳ ಬೇಟೆ ಆರಂಭ:
ಬೆಂಗಳೂರಿನಲ್ಲಿ ತರಬೇತಿ ಬಳಿಕ 2017ರಲ್ಲಿ ಪ್ಯಾರಿಸ್‌ನಲ್ಲಿ ಟಿ11 ವಿಭಾಗದಲ್ಲಿ 1,500 ಮೀ. ಓಟವನ್ನು 5 ನಿಮಿಷ 26 ಸೆಕೆಂಡುಗಳಲ್ಲಿ ಕ್ರಮಿಸಿ ಭರವಸೆಯ ಓಟಗಾರ್ತಿಯಾಗಿದ್ದರು. 2018ರಲ್ಲಿ ಇಂಡೋನೇಷ್ಯಾದ ಜಕಾರ್ತದ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ 1,500 ಮೀ. ಓಟವನ್ನು 5 ನಿಮಿಷ 40 ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಈಕೆಯ ಓಟಕ್ಕೆ ಚಿನ್ನದ ಪದಕದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರು ಮೆಚ್ಚುಗೆ ಸೂಚಿಸಿದ್ದರು. 2022ರಲ್ಲಿ ನವದೆಹಲಿ ಹಾಗೂ ಪುಣೆಯಲ್ಲಿ ನಡೆದ ಕ್ರೀಡಾಕೂಟದಲ್ಲೂ ಚಿನ್ನದ ಪದಕ ಗೆದ್ದಿದ್ದರು. 2023ರ ಫೆಬ್ರವರಿಯಲ್ಲಿ ದುಬೈನಲ್ಲಿ ನಡೆದ ಶಾರ್ಜಾ ಅಂತಾರಾಷ್ಟ್ರೀಯ ಮುಕ್ತ ಪ್ಯಾರಾ ಒಲಿಂಪಿಕ್ಸ್‌ನಲ್ಲಿ 1,500 ಮೀ. ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಬೆಂಗಳೂರಿನಲ್ಲಿ ನಡೆದ 400 ಮೀ., 1,500 ಮೀ. ಓಟದಲ್ಲೂ ಬೆಳ್ಳಿ ಪದಕ ಪಡೆದು, ಕಳೆದ ಜುಲೈನಲ್ಲಿ ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ ವಿಶ್ವ ಚಾಂಪಿಯನ್ ಸ್ಪರ್ಧೆಯಲ್ಲಿ ರಕ್ಷಿತಾ ರಾಜು 5ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಛಲ ಮುಂದುವರಿಸಿದ ರಕ್ಷಿತಾ ಮತ್ತೊಮ್ಮೆ ಚಿನ್ನದ ಬೇಟೆಗಾಗಿ ಕಾದಿದ್ದರು. ಇದೇ ಅಕ್ಟೋಬರ್‌ನಲ್ಲಿ ಚೀನಾದ ಹಾಂಗೌಜ್‌ನಲ್ಲಿ ನಡೆದ ಏಷ್ಯನ್ ಪ್ಯಾರಾ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆಯುವ ಕನಸು ನನಸಾಯಿತು. ಚಿನ್ನ ಗೆದ್ದ ರಕ್ಷಿತಾಗೆ ಬುಧವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆ ಸಲ್ಲಿಸಿದ್ದಾರೆ. ರಕ್ಷಿತಾ ಪ್ರಸ್ತುತ ಕೆಆರ್ ಪುರಂ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ಬಿಎ ಓದುತ್ತಿದ್ದಾರೆ. ಅಂತಾರಾಷ್ಟೀಯ ಮಟ್ಟದ ಕ್ರೀಡೆಯಲ್ಲಿ ದೇಶದ ಹೆಸರನ್ನು ಮಾತ್ರವಲ್ಲ ರಾಜ್ಯಕ್ಕೂ ಅದರಲ್ಲೂ ಕಾಫಿನಾಡಿಗೂ ಹೆಮ್ಮೆ ತಂದ ಕೀರ್ತಿ ರಕ್ಷಿತಾ ರಾಜುಗೆ ಸಲ್ಲುತ್ತದೆ. ಇದನ್ನೂ ಓದಿ: ಕೊಡಗಿನ 19,000ಕ್ಕೂ ಅಧಿಕ ಮಹಿಳೆಯರಿಗೆ ʻಗೃಹಲಕ್ಷ್ಮಿʼ ಸಿಕ್ಕಿಲ್ಲ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]