ಬೆಂಗಳೂರು: ವಿಜಯಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿಎಲ್‌ಡಿ ಸೌಹಾರ್ದ ಸಹಕಾರಿ ಬ್ಯಾಂಕ್ (BLD Souharda Bank) ಬೆಂಗಳೂರಲ್ಲಿ (Bengaluru) ತೆರೆದಿರುವ ಪ್ರಥಮ ಶಾಖೆಗೆ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ( Siddalinga Swamiji) ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರು ಭಾನುವಾರ ವಿಧ್ಯುಕ್ತ ಚಾಲನೆ ನೀಡಿದರು. ಒಟ್ಟಾರೆಯಾಗಿ ಇದು 11ನೇ ಶಾಖೆಯಾಗಿದ್ದು, ಶಿವಾನಂದ ವೃತ್ತದ ಎಸ್ ಎನ್ ಎಸ್ ಪ್ಲಾಜಾದಲ್ಲಿ ಕಚೇರಿಯನ್ನು ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು, ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ, ಕೃಷಿ ಹಾಗೂ ಕೈಗಾರಿಕೆ ಇವೆಲ್ಲವೂ ಸಮಾಜದಲ್ಲಿ ಒಂದಕ್ಕೊಂದು ಪೂರಕವಾಗಿವೆ. ಬೆಂಗಳೂರಿನಲ್ಲಿ ತನ್ನ ಪ್ರಪ್ರಥಮ ಶಾಖೆ ತೆರೆದಿರುವ
ಬಿ ಎಲ್ ಡಿ ಬ್ಯಾಂಕ್ ಜನರಿಗೆ ನೆರವಿನ ಹಸ್ತ ಚಾಚಲಿ ಎಂದಿದ್ದಾರೆ. ಇದನ್ನೂ ಓದಿ: ಅನಾಮಿಕ ವ್ಯಕ್ತಿಯ ಹಿಂದೆ ಯಾರಿದ್ದಾರೆ ಹೊರಬರುತ್ತೆ: ರಾಮಲಿಂಗಾ ರೆಡ್ಡಿ
ಲಿಂಗಾಯತ ಸಮುದಾಯದವರು ಹೀಗೆ ಸಮಾಜದ ಬಲವರ್ಧನೆಗೆ ರಚನಾತ್ಮಕ ಉಪಕ್ರಮಗಳನ್ನು ಮಾಡುವುದು ಶ್ಲಾಘನೀಯ ಸಂಗತಿಯಾಗಿದೆ. ಇವೆಲ್ಲವೂ ನಂಬಿಕೆ, ವಿಶ್ವಾಸ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗಳ ಮೂಲಕ ನೂರು ಶಾಖೆಗಳ ಮಟ್ಟಕ್ಕೆ ಬೆಳೆಯಲಿ ಎಂದು ಅವರು ಆಶಿಸಿದರು.
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರವು ಸರಿಯಾದ ಠೇವಣಿ, ಸಾಲ ನೀಡುವಿಕೆ ಮತ್ತು ಸಾಲ ವಸೂಲಾತಿಗಳ ಆಧಾರದ ಮೇಲೆ ನಡೆಯುತ್ತದೆ. ಬಿ ಎಲ್ ಡಿ ಸೌಹಾರ್ದ ಬ್ಯಾಂಕ್ ಕೇವಲ ಮೂರು ವರ್ಷಗಳಲ್ಲಿ ತನ್ನ ಹನ್ನೊಂದನೇ ಶಾಖೆಯನ್ನು ತೆರೆಯುವ ಮಟ್ಟಕ್ಕೆ ಬೆಳೆದಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.
ಸಚಿವ ಎಂ ಬಿ ಪಾಟೀಲ ಮಾತನಾಡಿ, ಫ ಗು ಹಳಕಟ್ಟಿಯವರು ಸ್ಥಾಪಿಸಿದ ಬಿಎಲ್‌ಡಿಇ ಸಂಸ್ಥೆಗೆ ಮೂವತ್ತು ವರ್ಷಗಳ ಹಿಂದೆಯೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾಲೂರಬೇಕೆಂಬ ಬಯಕೆ ಇತ್ತು. ನಂತರದ ದಿನಗಳಲ್ಲಿ ಸಹೋದರ ಸುನಿಲಗೌಡ ಪಾಟೀಲ ಅವರು ಆಸಕ್ತಿ ವಹಿಸಿದ್ದರಿಂದ ಅದು ಕಾರ್ಯರೂಪಕ್ಕೆ ಬಂದಿದೆ. ಹೆಚ್ಚು ಎಚ್ಚರಿಕೆಯಿಂದ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಸುನಿಲ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಬೆಂಗಳೂರಿನ ರಾಜಾಜಿನಗರ, ಬಸವೇಶ್ವರ ನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಮುಂತಾದ ಭಾಗಗಳಲ್ಲಿ ಉತ್ತರ ಕರ್ನಾಟಕದ ಲಕ್ಷಾಂತರ ಮಂದಿ ಇದ್ದಾರೆ. ಇವರ ಹಣಕಾಸು ಅಗತ್ಯಗಳಿಗೆ ಬಿಎಲ್ ಡಿ ಸೌಹಾರ್ದ ಬ್ಯಾಂಕ್ ಸ್ಪಂದಿಸಲಿ. ಮುಂದಿನ ದಿನಗಳಲ್ಲಿ ಆ ಭಾಗದಲ್ಲೂ ಶಾಖೆ ತೆರೆಯುವಂತಾಗಲಿ ಎಂದು ಅವರು ನುಡಿದಿದ್ದಾರೆ.
ಈ ಸಂದರ್ಭದಲ್ಲಿ, ವಿಜಯಪುರ ಜಿಲ್ಲೆಯಿಂದ ಬೆಂಗಳೂರಿಗೆ ಬಂದು ಅಪಾರ ಸಾಧನೆ ಮಾಡಿರುವ ವಿದ್ಯಾನಂದ ದೇಸಾಯಿ (ದೇಸಾಯಿ ಗ್ಲಾಸ್), ಡಾ.ರವಿಕುಮಾರ ಮುಕಾರ್ತಿಹಾಳ (ವೈದ್ಯಕೀಯ), ನಾನಾಸಾಹೇಬ ಹುಗ್ಗಿ (ಸಿವಿಲ್ ಕಂಟ್ರ್ಯಾಕ್ಟರ್), ಗುರುಪ್ರಸಾದ ನಡಗಡ್ಡಿ (ಸಾಫ್ಟ್ ವೇರ್ ಮತ್ತು ಅಥ್ಲೀಟ್ ತರಬೇತಿ) ಮತ್ತು ಮೌಲಾಲಿ ಅಲಗೂರು (ಮುಖ್ಯಪೇದೆ, ಶ್ವಾನದಳ) ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷ ಸುನೀಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ಭಾಷಣ ಮಾಡಿ, ಮುಂದಿನ ದಿನಗಳಲ್ಲಿ ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಇದೆ ಎಂದರು.
ಉಪಾಧ್ಯಕ್ಷ ಶರಣು ಗುಡ್ಡೊಡಗಿ, ಮಾಜಿ ಉಪ ಮೇಯರ್ ಪುಟ್ಟರಾಜು, ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್ ಮಾಲೀಕ ಎಸ್ ಪಿ ದಯಾನಂದ, ಎಕ್ಸೆಲಿಯರ್ ಟ್ರಾವೆಲ್ಸ್ ಮಾಲೀಕ ನಾಗಭೂಷಣ ರೆಡ್ಡಿ, ಮೌರ್ಯ ಹೋಟೆಲ್ ಮಾಲೀಕ ಶ್ಯಾಮರಾಜ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆಗೆ ಶಾಸಕ ಯತ್ನಾಳ್ ಆಕ್ಷೇಪ