ಇತ್ತೀಚಿನ ದಿನಮಾನಗಳಲ್ಲಿ ಬ್ಲ್ಯಾಕ್ ಪ್ಲಾಸ್ಟಿಕ್‌ಗಳ ಬಳಕೆ ಹೆಚ್ಚಾಗಿದೆ. ಕಿಚನ್‌ನಲ್ಲಿ ಅವುಗಳದ್ದೇ ಸದ್ದು. ಅಡುಗೆ ತಯಾರಿಸಲು ಬಳಸುವ ವಸ್ತುಗಳ ಸ್ಥಾನವನ್ನು ಇವುಗಳೇ ಆವರಿಸಿಕೊಂಡಿವೆ. ಕಿಚನ್‌ನಲ್ಲಿ ಸೌಟ್‌ಗಳು, ಬಿಸಿ ಆಹಾರವನ್ನು ಮುಚ್ಚಿಡುವ ಪಾತ್ರೆ ಮತ್ತು ಇತರೆ ಬಾಕ್ಸ್‌ಗಳೆಲ್ಲವೂ ಬ್ಲ್ಯಾಕ್ ಪ್ಲಾಸ್ಟಿಕ್ ಮಯ. ಅಷ್ಟೇ ಅಲ್ಲ, ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಆಹಾರವನ್ನು ಸಹ ಇಂತಹದೇ ಬಾಕ್ಸ್‌ಗಳಲ್ಲಿ ಪಾರ್ಸೆಲ್ ಕೊಡುತ್ತಾರೆ. ಇವುಗಳನ್ನು ಮತ್ತೆ ಬಳಕೆ ಮಾಡಬಹುದು ಅಂತ ಜನರು ಸಂಗ್ರಹಿಸಿ ಇಡುತ್ತಿದ್ದಾರೆ.
ಆದರೆ, ಈ ಬ್ಲ್ಯಾಕ್ ಪ್ಲಾಸ್ಟಿಕ್ ವಸ್ತುಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆ ಸಂಶೋಧನಾ ವರದಿಯೊಂದು ಪ್ರಕಟವಾಗಿದೆ. ಇವುಗಳ ಬಳಕೆಯಿಂದ ಮಾನವನ ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ವರದಿ ಬೆಳಕಿಗೆ ಬಂದ ಬೆನ್ನಲ್ಲೇ ಈಗ ಜನರಲ್ಲಿ ಬ್ಲ್ಯಾಕ್ ಪ್ಲಾಸ್ಟಿಕ್ ಫೋಬಿಯಾ (ಭೀತಿ) ಶುರುವಾಗಿದೆ.
Advertisement
ಏನಿದು ಬ್ಲ್ಯಾಕ್ ಪ್ಲಾಸ್ಟಿಕ್? ಬಳಕೆಯಿಂದ ಆರೋಗ್ಯದ ಮೇಲೆ ಬೀರಬಹುದಾದ ಎಫೆಕ್ಟ್ ಏನು? ಸಂಶೋಧನಾ ವರದಿ ಏನು ಹೇಳುತ್ತದೆ ಎಂಬ ಬಗ್ಗೆ ವಿವರ ಇಲ್ಲಿದೆ.
Advertisement
ಕಪ್ಪು ಪ್ಲಾಸ್ಟಿಕ್ ಎಂದರೇನು?
ಕಂಪ್ಯೂಟರ್, ಟಿವಿ ಮತ್ತು ಇತರೆ ಉಪಕರಣಗಳಂತಹ ಮರುಬಳಕೆ ಮಾಡಬಹುದಾದ ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಕಪ್ಪು ಪ್ಲಾಸ್ಟಿಕ್ ಅನ್ನು ತಯಾರಿಸಲಾಗುತ್ತದೆ. ಇದರ ಕಪ್ಪು ಬಣ್ಣವು ‘ಬ್ಲ್ಯಾಕ್ ಕಾರ್ಬನ್’ (ಅಲ್ಪಾವಧಿಯ ಮಾಲಿನ್ಯಕಾರಕ, ತಾಪಮಾನ ಏರಿಕೆಗೆ ಕಾರಣವಾಗುವ ಅಂಶ ಹೊಂದಿದೆ) ಎಂಬ ವಸ್ತುವಿನಿಂದ ಬರುತ್ತದೆ. ಇದು ಬ್ರೋಮಿನೇಟೆಡ್ ಜ್ವಾಲೆಯ ನಿವಾರಕಗಳು, ಆಂಟನಮಿ, ಸೀಸ, ಕ್ಯಾಡ್ಮಿಯಮ್ ಮತ್ತು ಪಾದರಸದಂತಹ ವಿಷಕಾರಿ ವಸ್ತುಗಳನ್ನು ಒಳಗೊಂಡಿದೆ. ಈ ಲೋಹಗಳು ವಷಕಾರಿಯಾಗಿರುತ್ತವೆ. ಅದೇ ಕಾರಣಕ್ಕೆ ಅನೇಕ ದೇಶಗಳಲ್ಲಿ ಇವುಗಳನ್ನು ನಿಷೇಧಿಸಲಾಗಿದೆ. ಕಪ್ಪು ಪ್ಲಾಸ್ಟಿಕ್‌ನಲ್ಲಿ ಜ್ವಾಲೆ-ನಿರೋಧಕ ಡೆಕಾಬ್ರೊಮೊಡಿಫಿನೈಲ್ ಈಥರ್ (ಬಿಡಿಇ-209) ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.
Advertisement
ಎಚ್ಚರಿಕೆ ಏನು?
ಬ್ಲ್ಯಾಕ್ ಪ್ಲಾಸ್ಟಿಕ್‌ಗಳ ಬಳಕೆ ಬಗ್ಗೆ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಆಹಾರ ತಯಾರಿಸಲು ಬಳಸುವ ಪ್ಲಾಸ್ಟಿಕ್ ಸೌಟ್‌ಗಳು ಮತ್ತು ಇತರೆ ಬಾಕ್ಸ್ಗಳ ವಿಷಕಾರಿ ರಾಸಾಯನಿಕವು ಬಿಸಿ ಆಹಾರದಲ್ಲಿ ಸೋರಿಕೆಯಾಗಿ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಬಹುದು ಎಂದು ತಿಳಿಸಲಾಗಿದೆ. ಆಹಾರದಲ್ಲಿ ರಾಸಾಯನಿಕಗಳು ಸೋರಿಕೆಯಾಗಿ, ಸೇವನೆಯಿಂದ ಕಾಲಾನಂತರದಲ್ಲಿ ಹಾನಿಯನ್ನುಂಟು ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
Advertisement
ಸಂಶೋಧನೆ ಏನು ಹೇಳುತ್ತೆ?
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೆಮೋಸ್ಪಿಯರ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯು ಯುನೈಟೆಡ್ ಸ್ಟೇಟ್ಸ್ನಲ್ಲಿ ಮಾರಾಟವಾಗುವ 203 ಬ್ಲ್ಯಾಕ್ ಪ್ಲಾಸ್ಟಿಕ್ ಗೃಹೋಪಯೋಗಿ ಉತ್ಪನ್ನಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಈ ಉತ್ಪನ್ನಗಳು ಡೆಕಾಬ್ರೊಮೊಡಿಫಿನೈಲ್ ಈಥರ್ ಎಂಬ ಜ್ವಾಲೆ ನಿವಾರಕ ರಾಸಾಯನಿಕವನ್ನು ಒಳಗೊಂಡಿವೆ. ಇದು ಮಾನವನ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರಲಿದೆ ಎಂಬ ಆತಂಕಕಾರಿ ವಿಚಾರವನ್ನು ವರದಿ ಉಲ್ಲೇಖಿಸಿದೆ.
ಅಡುಗೆಗೆ ಬಳಸುವ ಕೆಲಸ ವಸ್ತುಗಳು ಬಿಡಿಇ-209 (ರಾಸಾಯನಿಕ)ನ ದಿನಕ್ಕೆ 34,700 ಎನ್‌ಜಿ ನಷ್ಟು ಪ್ರಮಾಣ ಉಂಟುಮಾಡಬಹುದು. ಇದು ಯುಎಸ್ ಪರಿಸರ ಆರೋಗ್ಯ ಸಂರಕ್ಷಣಾ ಸಂಸ್ಥೆ (ಇಪಿಎ) ತಿಳಿಸಿರುವ ಸುರಕ್ಷಿತ ಮಾನ್ಯತೆ ಮಿತಿಗೆ ಸಮನಾಗಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಆದಾಗ್ಯೂ, ಈ ಲೆಕ್ಕಾಚಾರದಲ್ಲಿ ಒಂದಷ್ಟು ಲೋಪವಿದೆ ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ವಿಷಕಾರಿ ರಾಸಾಯನಿಕಗಳ ಮಟ್ಟವನ್ನು ತಪ್ಪಾಗಿ ಲೆಕ್ಕಾಚಾರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಅದಕ್ಕೊಂದಷ್ಟು ತಿದ್ದುಪಡಿ ಕೂಡ ಮಾಡಿದೆ. ಬ್ಲ್ಯಾಕ್ ಪ್ಲಾಸ್ಟಿಕ್ ವಸ್ತುಗಳ ಬಿಡಿಇ-209 ಸುರಕ್ಷಿತ ಮಾನ್ಯತೆ ಇಪಿಎಯ ಶಿಫಾರಸು ಮಿತಿಯ ಹತ್ತನೇ ಒಂದು ಭಾಗಕ್ಕಿಂತ ಕಡಿಮೆಯಿದೆ ಎಂದು ಹೊಸ ವರದಿ ಸ್ಪಷ್ಟಪಡಿಸಿದೆ.
ಬ್ಲ್ಯಾಕ್ ಪ್ಲಾಸ್ಟಿಕ್ ಸುರಕ್ಷಿತವೇ?
ಸಂಶೋಧನಾ ಅಂಕಿಅಂಶಗಳಲ್ಲಿ ತಿದ್ದುಪಡಿಯಾದರೂ, ಕಪ್ಪು ಪ್ಲಾಸ್ಟಿಕ್ ಉತ್ಪನ್ನಗಳ ಸುರಕ್ಷತೆಯ ಬಗ್ಗೆ ಆತಂಕ ಉಳಿದಿದೆ. ಜ್ವಾಲೆಯ ನಿವಾರಕಗಳ ‘ಸುರಕ್ಷಿತ ಪ್ರಮಾಣ’ ಎಷ್ಟು ಎಂಬುದರ ಬಗ್ಗೆ ಸಂಶೋಧಕರಲ್ಲಿ ಸ್ಪಷ್ಟ ಒಮ್ಮತವಿಲ್ಲ. ಬ್ಲ್ಯಾಕ್ ಪ್ಲಾಸ್ಟಿಕ್ ವಸ್ತುಗಳನ್ನು ತಿರಸ್ಕರಿಸುವ ಬದಲು, ಜನರು ನಿರ್ದಿಷ್ಟ ಹಂತದ ವರೆಗೆ ಅವುಗಳನ್ನು ಬಳಸುವುದು ಸೂಕ್ತ. ಈ ಕ್ರಮವು ನಾವು ಅತಿಯಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಸಾಡುವುದನ್ನು ತಪ್ಪಿಸಲು ಸಹಕಾರಿಯಾಗಿದೆ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.
ಮರುಬಳಕೆ ಮುನ್ನ ಯೋಚಿಸಿ
ಎಲ್ಲ ಬಗೆಯ ಕಪ್ಪು ಪ್ಲಾಸ್ಟಿಕ್‌ಗಳು ಮರುಬಳಕೆಗೆ ಸೂಕ್ತವಲ್ಲ. ಅವುಗಳ ವಿಷಕಾರಿ ರಾಸಾಯನಿಕ ಸಂಯೋಜನೆಯಿಂದಾಗಿ ಅಪಾಯಕಾರಿ ಎನಿಸಿವೆ. ಹೀಗಾಗಿ, ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವ ಪ್ಲಾಸ್ಟಿಕ್‌ಗಳು ಮರುಬಳಕೆ ಬಗ್ಗೆ ಎಚ್ಚರಿಕೆ ಅಗತ್ಯವಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಸುಧಾರಿತ ಮರುಬಳಕೆ ಅಭ್ಯಾಸಗಳು ಮತ್ತು ನಿಯಮ ಪಾಲನೆ ತುಂಬಾ ಅಗತ್ಯ ಎಂದು ಸಂಶೋಧಕರು ತಿಳಿಸಿದ್ದಾರೆ.
ಸುರಕ್ಷತೆಗೆ ಪರ್ಯಾಯ ಏನು?
ಕಪ್ಪು ಪ್ಲಾಸ್ಟಿಕ್ ಬದಲಿಗೆ ಸ್ಟೇನ್ಲೆಸ್ ಸ್ಟೀಲ್, ಸಿಲಿಕೋನ್, ಮರ ಅಥವಾ ಗಾಜಿನ ಪಾತ್ರೆಗಳು ಮತ್ತು ಕಂಟೈನರ್‌ಗಳನ್ನು ಬಳಸಬಹುದು. ಪ್ಲಾಸ್ಟಿಕ್ ಬಳಸುವುದಾದರೆ, ಬಿಪಿಎ ಮುಕ್ತ ಮತ್ತು ಉತ್ತಮ ದರ್ಜೆಯ ಪ್ಲಾಸ್ಟಿಕ್‌ಗೆ ಆದ್ಯತೆ ನೀಡಬೇಕು. ಮರುಬಳಕೆಯನ್ನು ಉತ್ತೇಜಿಸಿ, ಕಪ್ಪು ಪ್ಲಾಸ್ಟಿಕ್ ಅನಗತ್ಯ ಬಳಕೆಯನ್ನು ತಪ್ಪಿಸಬೇಕಿದೆ.