ಉಡುಪಿ: 22 ಆಡು, ಹತ್ತಾರು ಹಸುಗಳನ್ನು ಭಕ್ಷಿಸಿ, ಜಿಲ್ಲೆಯ ಬೈಂದೂರು ತಾಲೂಕಿನ ಮುದೂರು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಕರಿ ಚಿರತೆಯನ್ನು ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಸುಮಾರು ದಿನಗಳಿಂದ ಮುದೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕರಿ ಚಿರತೆ ಬೀಡು ಬಿಟ್ಟಿತ್ತು. ಇದೇ ಗ್ರಾಮದ ಮರ್ಕಡಿ ಜೋಸ್ ಎಂಬವರು ಸಾಕಿದ್ದ ಸುಮಾರು 22 ಮೇಕೆಗಳನ್ನು ಹಿಡಿದು ತಿಂದಿತ್ತು. ಅಲ್ಲದೇ ಹಸುಗಳನ್ನು ಬೇಟೆಯಾಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.
Advertisement
ಮರ್ಕಡಿ ಜೋಸ್ ಅವರು ಸಾಕಿದ್ದ ಮೇಕೆಗಳನ್ನು ಕೆಲವು ದಿನಗಳಿಂದ ಒಂದರಂತೆ ಎಳೆದುಕೊಂಡು ಹೋಗುತ್ತಿತ್ತು. ಈ ಕುರಿತು ಮರ್ಕಡಿ ಜೋಸ್ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆಯೇ ಕುಂದಾಪುರ ವಲಯಾರಣ್ಯಾಧಿಕಾರಿ ಶರತ್ ಶೆಟ್ಟಿ ನೇತೃತ್ವದಲ್ಲಿ ಜೋಸ್ ಅವರ ಮನೆಯ ಹತ್ತಿರದ ತೋಟದಲ್ಲಿ ಬೋನು ಇಟ್ಟುದ್ದರು. ಹೀಗಾಗಿ ಮಂಗಳವಾರ ಚಿರತೆ ಬೋನ್‍ಗೆ ಬಿದ್ದಿದೆ.
Advertisement
Advertisement
ಈ ಭಾಗದ ಜನರು ಹಿಂದೆಂದು ಕರಿ ಚಿರತೆ ನೋಡಿರಲಿಲ್ಲ. ಹೀಗಾಗಿ ಅದನ್ನು ನೋಡಲು ಮುಗಿಬಿದ್ದಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ, ಮುದೂರು ವನಪಾಲಕರಾದ ಸಂತೋಷ ಹಾಗೂ ಗ್ರಾಮಸ್ಥರು ಚಿರತೆಯನ್ನು ವಾಹನಕ್ಕೆ ಸಾಗಿಸಿದರು. ಸೆರೆ ಸಿಕ್ಕ ಕರಿ ಚಿರತೆಯನ್ನು ಸುರಕ್ಷಿತ ತಾಣಕ್ಕೆ ಕೊಂಡೊಯ್ದು ಬಿಡುವುದಾಗಿ ಕುಂದಾಪುರ ವಲಯಾರಣ್ಯಾಧಿಕಾರಿ ಶರತ್ ಶೆಟ್ಟಿ ಹೇಳಿದರು.
Advertisement
ಮುದೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಹಾಗೂ ಹುಲಿಗಳ ಕಾಟ ಹೆಚ್ಚಾಗಿದೆ. ಪ್ರತಿ ದಿನ ಒಬ್ಬೊಬ್ಬರ ಮನೆಯಿಂದ ಹಸು ಮೇಕೆ ಕಾಣೆಯಾಗುತ್ತಿವೆ. ಅಲ್ಲದೇ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದ್ದು, ಹಸು ಮೇಕೆಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡುತ್ತಿರುವವರ ಜೀವನ ಕಷ್ಟವಾಗುತ್ತಿದೆ. ಇದಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.