Connect with us

Bengaluru City

ಬೆಂಗ್ಳೂರು ಕಂಪನಿಯ ರಹಸ್ಯ ಮಾಹಿತಿ ಬಹಿರಂಗಕ್ಕೆ ಸ್ವಿಸ್ ಸರ್ಕಾರ ಒಪ್ಪಿಗೆ

Published

on

ನವದೆಹಲಿ/ಬೆರ್ನ್: ಕಪ್ಪುಹಣ ತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಹಣಕಾಸು ವಂಚನೆ ಆರೋಪ ಎದುರಿಸುತ್ತಿರುವ ಬೆಂಗಳೂರು ಮತ್ತು ಚೆನ್ನೈ ಮೂಲದ 2 ಕಂಪನಿ ಹಾಗೂ ಮೂವರು ವ್ಯಕ್ತಿಗಳ ಕುರಿತ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳಲು ಸ್ವಿಜರ್ಲೆಂಡ್ ಸರ್ಕಾರ ಒಪ್ಪಿಗೆ ನೀಡಿದೆ.

ಬೆಂಗಳೂರು ಮೂಲದ ಜಿಯೋಡೆಸಿಕ್ ಮತ್ತು ಚೆನ್ನೈ ಮೂಲದ ಆಧಿ ಕಂಪನಿ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿದ್ದು, ಈ ಕಂಪನಿಗಳ ಮಾಹಿತಿ ನೀಡುವಂತೆ ತನಿಖಾಧಿಕಾರಿಗಳು ಕೇಳಿದ್ದರು. ಈ ಮಾಹಿತಿಯನ್ನು ನೀಡಲು ಸ್ವಿಸ್ ಅಧಿಕಾರಿಗಳು ಸಮ್ಮತಿಸಿದ್ದಾರೆ ಎಂದು ವರದಿಯಾಗಿದೆ.

ಈ ಎರಡು ಕಂಪನಿಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ಮಾಹಿತಿ ಬಹಿರಂಗಕ್ಕೆ ಫೆಡರಲ್ ತೆರಿಗೆ ವಿಭಾಗ ಸಮ್ಮತಿಸಿದೆ ಎಂದು ಸ್ವಿಸ್ ಸರ್ಕಾರ ಪ್ರತ್ಯೇಕ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ.

ಜಿಯೋಡೆಸಿಕ್ ಕಂಪನಿಯ ಮೂವರು ನಿರ್ದೇಶಕರಾದ ಪಂಕಜ್‍ಕುಮಾರ್ ಓಂಕಾರ್ ಶ್ರೀವಾತ್ಸವ, ಪ್ರಶಾಂತ್ ಶರದ್ ಮುಲೇಕರ್, ಕಿರಣಕ್ ಕುಲಕರ್ಣಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಸ್ವಿಸ್ ಅಧಿಕಾರಿಗಳು ಸಮ್ಮತಿಸಿದ್ದಾರೆ.

ವೇಗವಾಗಿ ಪ್ರಗತಿ ಹೊಂದುತ್ತಿರುವ ಕಂಪನಿ ಎಂದು ಬಿಂಬಿಸಿಕೊಂಡಿದ್ದ ಜಿಯೋಡೆಸಿಕ್ ಕಂಪನಿಯ ಷೇರುಗಳನ್ನು ಷೇರು ಮಾರುಕಟ್ಟೆಯಲ್ಲಿ ಅಮಾನತಿನಲ್ಲಿ ಇಡಲಾಗಿದೆ. ಈ ಕಂಪನಿಯ ನಿರ್ದೇಶಕರನ್ನು ಸೆಬಿ, ಜಾರಿ ನಿರ್ದೇಶನಾಲಯ, ಆರ್ಥಿಕ ಅಪರಾಧ ವಿಭಾಗ ಮತ್ತು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ.ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಂತೆ ಪಂಕಜ್ ಕುಮಾರ್ ಜಿಯೋಡೆಸಿಕ್ ಕಂಪನಿಯ ಮುಖ್ಯಸ್ಥರಾಗಿದ್ದರೆ, ಕಿರಣ್ ಕುಲಕರ್ಣಿ ಆಡಳಿತ ನಿರ್ದೇಶಕ, ಪ್ರಶಾಂತ್ ಮುಲೇಕರ್ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

ಚೆನ್ನೈ ಮೂಲದ ಆಧಿ ಎಂಟರ್ ಪ್ರೈಸಸ್ ಕಂಪನಿ 2014ರಲ್ಲಿ ಸ್ಥಾಪನೆಯಾಗಿದ್ದು, ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಕಂಪನಿ ಎಂದು ಹೇಳಿಕೊಂಡಿತ್ತು. ಈ ಕಂಪನಿಯಲ್ಲಿ ಹಲವು ರಾಜಕಾರಣಿಗಳ ಪಾಲು ಇದೆ ಎಂಬ ಶಂಕೆ ವ್ಯಕ್ತವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *