Black Monday| ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ 19 ಲಕ್ಷ ಕೋಟಿ

Public TV
1 Min Read
Narendra Modi great friend of mine Donald Trump Announces 26 percentage Discounted Reciprocal Tariff On India

ಮುಂಬೈ/ ವಾಷಿಂಗ್ಟನ್‌:  ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗಿದ್ದು, ಇಂದು ಒಂದೇ ದಿನ ಹೂಡಿಕೆದಾರರಿಗೆ 19 ಲಕ್ಷ ಕೋಟಿ ರೂ. ನಷ್ಟವಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದ ಕಾರಣ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಭಾರೀ ಇಳಿಕೆ ಕಂಡಿದೆ.

ಸೆನ್ಸೆಕ್ಸ್‌ ಆರಂಭದಲ್ಲಿ 4 ಸಾವಿರ ಅಂಕ ಪತನಗೊಂಡು ನಂತರ ಚೇತರಿಕೆ ಕಂಡಿತ್ತು. ಬೆಳಗ್ಗೆ 11 ಗಂಟೆಯ ವೇಳೆಗೆ 2,900 ಅಂಕ ಚೇತರಿಕೆಯಾಗಿ 72,423.48 ರಲ್ಲಿ ವ್ಯವಹಾರ ನಡೆಸುತ್ತಿತ್ತು. ನಿಫ್ಟಿ 900 ಅಂಕ ಇಳಿಕೆಯಾಗಿ 21,960.80 ರಲ್ಲಿ ವ್ಯವಹಾರ ನಡೆಸುತ್ತಿದೆ. ರಿಯಾಲ್ಟಿ, ಐಟಿ, ಆಟೋ ಮತ್ತು ಲೋಹ ಮುಂತಾದ ಕ್ಷೇತ್ರಗಳ ಷೇರುಗಳು ಮೌಲ್ಯ ಇಳಿಕೆಯಾಗಿದೆ.

ಸೋಮವಾರ ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏಷ್ಯಾದ ಎಲ್ಲ ಮಾರುಕಟ್ಟೆಗಳಲ್ಲಿ ಭಾರೀ ಇಳಿಕೆಯಾಗಿತ್ತು. ಗಿಫ್ಟ್‌ ನಿಫ್ಟಿಯೂ ಅಂಕ ಇಳಿಕೆಯಾಗುತ್ತಿದ್ದಂತೆ ಭಾರತದಲ್ಲೂ ಪರಿಣಾಮ ಬೀಳುವುದು ಖಚಿತವಾಗಿತ್ತು. ಬೆಳಗ್ಗೆಯವರೆಗೆ 19 ಲಕ್ಷ ಕೋಟಿ ನಷ್ಟ ಸಂಭವಿಸಿದ್ದು  ನಿಫ್ಟಿ ಮತ್ತು ಸೆನ್ಸೆಕ್ಸ್‌ ಮತ್ತಷ್ಟು ಕುಸಿದರೆ  ನಷ್ಟದ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ.

ಗಿಫ್ಟಿ ನಿಫ್ಟಿ 888, ಜಪಾನ್‌ನ ನಿಕ್ಕಿ 225 2,302 ಅಂಕ, ತೈವಾನ್‌ನ ವೈಯ್ಟೆಡ್ ಸೂಚ್ಯಂಕವೂ 2063 ಅಂಶ ಕುಸಿಯಿತು. ಹಾಂಕಾಂಗ್‌ನ ಹ್ಯಾಂಗ್‌ಸೆನ್‌ 2,677 ಅಂಕ ಕುಸಿದಿದೆ.

ಶುಕ್ರವಾರದಿಂದಲೇ ಅಮೆರಿಕ ಮಾಧ್ಯಮಗಳು Black Monday ಹೆಸರಿನಲ್ಲಿ ಸೋಮವಾರ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಲಿದೆ ಎಂದು ವರದಿಗಳು ಬಿತ್ತರಿಸುತ್ತಿದ್ದವು. ನಿರೀಕ್ಷೆಯಂತೆ ಸೋಮವಾರ ವಿಶ್ವದ ಮಾರುಕಟ್ಟೆಯಲ್ಲಿ ರಕ್ತಪಾತವಾಗಿದ್ದು ಹೂಡಿಕೆದಾರರಿಗೆ ಭಾರೀ ನಷ್ಟವಾಗಿದೆ.

Share This Article