ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ಕರಿ ಚಿರತೆಯೊಂದು ನಾಯಿಯನ್ನು ಬೆನ್ನಟ್ಟಿ ಬಂದು ದಾರಿ ತಿಳಿಯದೇ ಬಾವಿಯಲ್ಲಿ ಬದ್ದಿದೆ.
ಹಿರ್ಗಾನದ ರಾಜಾರಾಮ್ ಕಡಂಬ ಎಂಬವರ ಮನೆಯ ಬಾವಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಾಯಿಯನ್ನು ಬೆನ್ನತ್ತಿ ಬಂದಿದ್ದ ಕರಿ ಚಿರತೆ ನಾಯಿಯ ಜೊತೆಗೆ ಭಾರೀ ಆಳದ ಬಾವಿಗೆ ಬಿದ್ದಿದೆ. ಬಾವಿಗೆ ಬಿದ್ದ ರಭಸಕ್ಕೆ ನಾಯಿ ಸತ್ತಿದೆ.
Advertisement
Advertisement
ಚಿರತೆ ನೀರಿಗೆ ಬಿದ್ದು ಒದ್ದಾಡುತ್ತಿತ್ತು. ಇದನ್ನು ಕಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಬಾವಿಯ ಮೇಲೆ ಬೋನನ್ನು ಅಳವಡಿಸಿದ್ದಾರೆ. ಬಾವಿಗೆ ಏಣಿಯನ್ನು ಇಳಿಯಬಿಡಲಾಯ್ತು. ಏಣಿಯ ಮೂಲಕ ಅಪರೂಪದ ಕರಿ ಚಿರತೆಯನ್ನು ಮೇಲಕ್ಕೆತ್ತಲಾಯ್ತು.
Advertisement
Advertisement
ಸ್ವತಃ ಚಿರತೆಯೇ ಏಣಿಯಲ್ಲಿ ಏರಿಕೊಂಡು ಬಂದಿದ್ದು ವಿಶೇಷವಾಗಿತ್ತು. ಏಣಿಯ ತುದಿಗೆ ಬೋನನ್ನು ಅರಣ್ಯಾಧಿಕಾರಿಗಳು ಅಳವಡಿಸಿದ್ದರು. ಏಣಿಯೇರಿ ಬಂದ ಚಿರತೆ ಸೀದಾ ಬೋನೊಳಗೆ ಬಿದ್ದಿದೆ. ಸ್ಥಳೀಯರು ಮತ್ತು ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕರಿ ಚಿರತೆಯನ್ನು ರಕ್ಷಿಸಿದ್ದಾರೆ.
ಬಾವಿಗೆ ಬಿದ್ದ ರಭಸಕ್ಕೆ ಚಿರತೆಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಚಿರತೆ ಸಂಪೂರ್ಣವಾಗಿ ಗುಣಮುಖವಾದ ನಂತರ ಪಶ್ಚಿಮ ಘಟ್ಟಕ್ಕೆ ಸುರಕ್ಷಿತವಾಗಿ ಬಿಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
ಅಪರೂಪದ ಕರಿ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಮೂರು ವರ್ಷದ ಹಿಂದೆ ಮಣಿಪಾಲದಲ್ಲಿ ಕರಿಚಿರತೆ ಕಾಣಿಸಿಕೊಂಡಿತ್ತು. ಇದೀಗ ಕಾರ್ಕಳದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದೆ.