-10+2 ಸೂತ್ರ ಮುಂದಿಟ್ಟ ಬಿ.ಎಲ್.ಸಂತೋಷ್
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಳಂಬ, ಪಕ್ಷದೊಳಗೆ ಗೊಂದಲ, ಅಸಮಾಧಾನಗಳು ಹೆಚ್ಚಾಗಿರುವ ಮಧ್ಯದಲ್ಲೇ ಸಿಎಂ ಯಡಿಯೂರಪ್ಪರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಇವತ್ತು ಬೆಳ್ಳಂಬೆಳಗ್ಗೆ ಬೆಂಗಳೂರಿನ ಧವಳಗಿರಿ ನಿವಾಸಕ್ಕೆ ಆಗಮಿಸಿದ್ದ ಬಿ.ಎಲ್.ಸಂತೋಷ್ ಸುಮಾರು 15 – 20 ನಿಮಿಷಗಳ ಕಾಲ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಇವರಿಬ್ಬರ ಈ ಮಾತುಕತೆ ಭಾರೀ ಕುತೂಹಲ ಹುಟ್ಟಿಸಿದೆ.
Advertisement
ಎರಡು ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಬಿ.ಎಲ್ ಸಂತೋಷ್ ಸಿಎಂ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಸಂಪುಟ ವಿಸ್ತರಣೆ ಬಗ್ಗೆ ಹಲವು ಸುಳಿವುಗಳನ್ನು ಕೊಟ್ಟಿದೆ.
Advertisement
ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದವರಲ್ಲಿ ಎಷ್ಟು ಜನರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು. ಪಕ್ಷ ನಿಷ್ಠರಲ್ಲಿ ಎಷ್ಟು ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಸೋತವರಿಗೂ ಅವಕಾಶ ಕೊಡಬೇಕಾ? ಅರ್ಹ ಶಾಸಕರಲ್ಲಿ ಮನೆ ಮಾಡಿರುವ ಅಸಮಾಧಾನ, ಹಾಲಿ ಸಚಿವರಿಂದ ಕೆಲ ಖಾತೆಗಳನ್ನು ವಾಪಸ್ ಪಡೆಯುವ ವಿಚಾರಗಳನ್ನು ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ದೆಹಲಿಗೆ ಬರುವಂತೆ ಹೈಕಮಾಂಡ್ ಆಹ್ವಾನಿಸಿದರೆ ಇಬ್ಬರೂ ಸೇರಿ ವರಿಷ್ಠರ ಜೊತೆ ಚರ್ಚೆ ನಡೆಸುವ ಬಗ್ಗೆಯೂ ಉಭಯ ನಾಯಕರು ಮಾತಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿಎಂ ದೆಹಲಿಗೆ ತೆರಳುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂತೋಷ್ ಭೇಟಿ ಕುತೂಹಲ ಕೆರಳಿಸಿದೆ. ದಾವೋಸ್ ನಿಂದ ವಾಪಸ್ ಬಂದ ಬಿಎಸ್‍ವೈ ಅವರ ಕುಶಲೋಪರಿಯನ್ನೂ ಇದೇ ವೇಳೆ ವಿಚಾರಿಸಿದ್ದಾರೆ. ಇದೇ ನೆಪದಲ್ಲಿ ಸಂಪುಟ ಕುರಿತು ಮಹತ್ವದ ಚರ್ಚೆ ಮಾಡಿದ್ದಾರೆ. ಮಾತುಕತೆ ಬಳಿಕ ತಮ್ಮ ನಿವಾಸದ ಹೊರಗೆ ಬಂದು ಬಿ.ಎಲ್ ಸಂತೋಷ್ ರನ್ನು ಸಿಎಂ ಖುದ್ದು ಬೀಳ್ಕೊಟ್ಟರು.
Advertisement
Advertisement
ಯಡಿಯೂರಪ್ಪ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಬಿ.ಎಲ್. ಸಂತೋಷ್ ಅವರು ಸಂಪುಟ ವಿಸ್ತರಣೆಗೆ 10+2 ರ ಸೂತ್ರ ಪ್ರಸ್ತಾಪಿಸಿದರು ಎಂದು ಹೇಳಲಾಗಿದೆ. ಗೆದ್ದವರಲ್ಲಿ 10 ಮಂದಿಗೆ, ಮೂಲ ಶಾಸಕರ ಪೈಕಿ ಇಬ್ಬರಿಗೆ ಮಂತ್ರಿಗಿರಿ ಕೊಡುವ ಪ್ರಸ್ತಾಪವನ್ನು ಸಂತೋಷ್ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ಯಡಿಯೂರಪ್ಪನವರು ಸದ್ಯಕ್ಕೆ ಅರ್ಹರ ಪೈಕಿ 10 ಜನರಿಗೆ ಮಾತ್ರ ಸಚಿವರಾಗಿ ಮಾಡೋಣ, ಉಳಿದವರಿಗೆ ಜೂನ್ ಬಳಿಕ ನೋಡೋಣ ಎಂದು ತಮ್ಮ ಪ್ರಸ್ತಾಪವನ್ನೂ ಬಹಿರಂಗಪಡಿಸಿದ್ರು ಎನ್ನಲಾಗಿದೆ. ಯಡಿಯೂರಪ್ಪನವರ ಪ್ರಸ್ರಾಪವನ್ನು ಹೈಕಮಾಂಡ್ ಮುಂದಿಡುತ್ತೇನೆ ಎಂದು ಬಿ ಎಲ್ ಸಂತೋಷ್ ತಿಳಿಸಿದ್ರು ಎನ್ನಲಾಗಿದೆ. ಹೈಕಮಾಂಡ್ ಒಪ್ಪಿದ್ರೆ ಯಡಿಯೂರಪ್ಪನವರು ದೆಹಲಿಗೆ ತೆರಳುವ ಸಾಧ್ಯತೆ ಇದೆ. ಇಲ್ಲದಿದ್ದರೆ ದೆಹಲಿಗೆ ಹೋಗದೇ ಹೈಕಮಾಂಡ್ ಒಪ್ಪಿಗೆ ಪಡೆದು ಈ ತಿಂಗಳಾತ್ಯದಲ್ಲೇ ಸಂಪುಟ ವಿಸ್ತರಣೆ ಮಾಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.