ಬಾಗಲಕೋಟೆ: ಸಮ್ಮಿಶ್ರ ಸರ್ಕಾರದ ಭವಿಷ್ಯ ನುಡಿದವರ ಭವಿಷ್ಯ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್ ಕೇಂದ್ರ ಸಚಿವ ಸದಾನಂದ ಗೌಡರಿಗೆ ತಿರುಗೇಟು ನೀಡಿದರು.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಕೆ ಹರಿಪ್ರಸಾದ್, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಒಟ್ಟಾಗಿ ಚುನಾವಣೆ ಎದುರಿಸಲಿವೆ. ದೇಶದಲ್ಲಿ ಬಿಜೆಪಿ ಪ್ರಧಾನಿ ಹೊರತು ಪಡಿಸಿ, ಯಾರಾದ್ರೂ ಪ್ರಧಾನಿಯಾಗಬಹುದು ಅದೇ ನಮ್ಮ ಗುರಿ ಎಂದರು.
ಬಿಜೆಪಿ ಪ್ರಧಾನಿ ಉಳಿದುಕೊಳ್ಳಬಾರದು ಅನ್ನೋ ದೃಷ್ಟಿಕೋನ ಇಟ್ಟುಕೊಂಡು ನಾವು ಮುನ್ನಡೆಯುತ್ತಿದ್ದೇವೆ. ಕಾಂಗ್ರೆಸ್ ಗೆ ಏಕಾಂಗಿಯಾಗಿ ಸ್ಪರ್ಧಿಸುವ ಶಕ್ತಿ ಇದೆ. ಆದ್ರೆ ಬದಲಾದ ಪರಿಸ್ಥಿತಿ ಹಾಗೂ ಸನ್ನಿವೇಶದಲ್ಲಿ ಎಲ್ಲರ ಸಹಕಾರವನ್ನು ತೆಗೆದುಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆ ಅಂದ್ರು.
ಇದೇ ವೇಳೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಸಿಎಂ ಆಗಲಿದ್ದಾರೆ ಎಂಬ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಸ್ವಾಮೀಜಿಗಳ ಮಾತಿಗೆ ನಾನು ಪ್ರತಿಕ್ರಿಯಿಸಲ್ಲ. ರಾಜಕಾರಣಿಗಳು ಹೇಳಿಕೆ ನೀಡಿದಿದ್ದರೆ, ನಾನು ಪ್ರತಿಕ್ರಿಯಿಸುತ್ತಿದ್ದೆ ಅಂತ ಹೇಳಿ ನುಣುಚಿಕೊಂಡ್ರು.
ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ನೇಮಕವನ್ನು ನಿರ್ಧರಿಸಲಿದ್ದಾರೆ. ನಿಗಮ ಮಂಡಳಿ ಆಯ್ಕೆಗೆ ಮೊದಲ ಹಂತದಲ್ಲಿ ಹಿರಿಯ ಶಾಸಕರಿಗೆ ನೀಡಲಾಗುತ್ತೆ, ಉಳಿದಂತೆ ಏರಿಯಾ ಕಾರ್ಯಕರ್ತರಿಗೆ ನೀಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
ಮಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿವಿಎಸ್, ಯಾವುದೇ ಕ್ಷಣದಲ್ಲಿ ಸಮ್ಮಿಶ್ರ ಸರಕಾರ ಪತನವಾಗಬಹುದು. ಇವರು ಪ್ರತಿನಿತ್ಯ ಕುರ್ಚಿಗಾಗಿ ಕಚ್ಚಾಟ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಸಮ್ಮಿಶ್ರ ಸರಕಾರ ಯಾವಾಗ ಬೀಳುತ್ತೆ ಎಂದು ಜನ ಕಾಯುತ್ತಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಎರಡೂ ಪಕ್ಷಗಳು ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿವೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳು ಹಿಡಿತ ಕಳಕೊಂಡಿದ್ದು ತಮಗೆ ಇಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಈ ಸರಕಾರ ಹೆಚ್ಚು ಕಾಲ ಬಾಳುವುದಿಲ್ಲ ಅನ್ನೋದು ನಿಶ್ಚಿತ ಅಂತ ಡಿವಿಎಸ್ ರಾಜ್ಯ ಸರಕಾರದ ಬಗ್ಗೆ ಭವಿಷ್ಯ ನುಡಿದಿದ್ದರು