-ಮೈಸೂರು ಹೋಟೆಲೊಂದರಲ್ಲಿ ತಡರಾತ್ರಿ ಹೈಡ್ರಾಮ
ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಲಿದೆ.
ಈ ನಡುವೆ ಈ ಹಿಂದೆ ಬಿಜೆಪಿಯಿಂದ ಗೆದ್ದು ಕಾಂಗ್ರೆಸ್ ಬೆಂಬಲದಿಂದ ಅಧ್ಯಕ್ಷರಾಗಿದ್ದ ವಾಸಪ್ಪಗೌಡ ರಾಜೀನಾಮೆ ನೀಡಿದ್ದರು. ಆದರೆ ನಿರ್ಗಮಿತ ಅಧ್ಯಕ್ಷ ವಾಸಪ್ಪಗೌಡ ತಮ್ಮ ಬೆಂಬಲವನ್ನು ಯಾರಿಗೆ ನೀಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಅದರಂತೆ ವಾಸಪ್ಪಗೌಡರನ್ನು ಮನವೊಲಿಸಿ ಕಾಂಗ್ರೆಸ್ ಮುಖಂಡರು ತಮ್ಮ ಪಾಳಯದಲ್ಲಿ ಉಳಿಸಿಕೊಂಡಿದ್ದರು. ಅದಕ್ಕಾಗಿಯೇ ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದರು. ಆದರೆ ತಡರಾತ್ರಿ ಅವರನ್ನು ಬಿಜೆಪಿ ಪ್ರಮುಖರು ಸೆಳೆದುಕೊಂಡಿದ್ದಾರೆ ಎನ್ನಲಾಗಿದೆ. ಮೈಸೂರಿನ ಹೋಟೆಲ್‍ವೊಂದರಲ್ಲಿ ವಾಸಪ್ಪಗೌಡ ತಂಗಿದ್ದರು. ಜೊತೆಗೆ ಕಾಂಗ್ರೆಸ್ ಪ್ರಮುಖರು ತಾಪಂ ಸದಸ್ಯರು ಜೊತೆಗಿದ್ದರು ಎನ್ನಲಾಗಿದೆ.
Advertisement
Advertisement
ತಡರಾತ್ರಿ ನಡೆದ ಹೈಡ್ರಾಮದಲ್ಲಿ ವಾಸಪ್ಪಗೌಡರನ್ನು ಬಿಜೆಪಿ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ. ಹೋಟೆಲ್‍ನಿಂದ ತಡರಾತ್ರಿ ವಾಸಪ್ಪಗೌಡ ಕೆಲವರೊಂದಿಗೆ ನಿರ್ಗಮಿಸುತ್ತಿರುವ ಎಂದು ಹೇಳಲಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈವರೆಗಿನ ಮಾಹಿತಿ ಪ್ರಕಾರ ನಿರ್ಗಮಿತ ಅಧ್ಯಕ್ಷ ಮತ್ತು ಆಣೆ ಪ್ರಮಾಣದ ಕಾರಣ ಇಬ್ಬರು ಬಿಜೆಪಿ ಸದಸ್ಯರ ಬೆಂಬಲದಿಂದ ಕಾಂಗ್ರೆಸ್ ಪಕ್ಷದ ಬಿ.ಜಿ. ಚಂದ್ರಮೌಳಿ ಅಧ್ಯಕ್ಷರಾಗುತ್ತಾರೆ ಎಂದು ಹೇಳಲಾಗುತಿತ್ತು. ಆದರೆ ಮೈಸೂರಿನಲ್ಲಿ ನಡೆದ ಹೈಡ್ರಾಮಾ ಚುನಾವಣೆಯ ರೋಚಕತೆ ಹೆಚ್ಚಿಸಿದೆ. ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಗೋ ಅಥವಾ ಬಿಜೆಪಿಗೋ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.