ನವದೆಹಲಿ: ಮಾರ್ಚ್ 30 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆ ಮುಂದೆ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸಿಆರ್‍ಪಿಸಿ 41ರ ಅಡಿಯಲ್ಲಿ ದೆಹಲಿ ಪೊಲೀಸರು ತೇಜಸ್ವಿ ಸೂರ್ಯಗೆ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ ಅವರು ದೆಹಲಿಗೆ ಹಿಂತಿರುಗಿದಾಗ ಪೊಲೀಸರು ವಿಚಾರಣೆ ನಡೆಸಬಹುದು ಎಂದು ಹೇಳಿದ್ದರು. ಅದರಂತೆಯೇ ಜೂನ್ ಕೊನೆಯ ವಾರದಲ್ಲಿ ಅಶೋಕ ರಸ್ತೆಯಲ್ಲಿರುವ ತೇಜಸ್ವಿ ಸೂರ್ಯರ ಸರ್ಕಾರಿ ಮನೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಮುಖ್ಯಮಂತ್ರಿ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ
ಮಾರ್ಚ್ 30 ರಂದು 150-200 ಬಿಜೆಪಿಯ ಯುವ ಮೋರ್ಚಾದ ಕಾರ್ಯಕರ್ತರು ಕಾಶ್ಮೀರ್ ಫೈಲ್ಸ್ ಕುರಿತು ಕೇಜ್ರಿವಾಲ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಸಿಎಂ ಮನೆಯ ಮುಂದೆ ಹಾಕಿದ್ದ ಬ್ಯಾರಿಕೇಡ್‍ಗಳನ್ನು ಮುರಿದು ಒಳ ಹೋಗಲು ಯತ್ನಿಸಿ, ಸಿಸಿಟಿವಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು. ಅಲ್ಲದೇ ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಘಟನೆ ಸಂಬಂಧ ಪೊಲೀಸರು ಈಗಾಗಲೇ ಸಂಘಟನೆಯ ಎಂಟು ಕಾರ್ಯಕರ್ತರನ್ನು ಬಂಧಿಸಿದ್ದು, ಅಧ್ಯಕ್ಷರಾಗಿರುವ ತೇಜಸ್ವಿ ಸೂರ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಬಾಳಾಸಾಹೇಬ್ ಮೇಲಿನ ಗೌರವಕ್ಕೆ ಆದಿತ್ಯ ಠಾಕ್ರೆ ವಿರುದ್ಧ ಕೈಮಕೈಗೊಂಡಿಲ್ಲ: ಶಿಂಧೆ ಬಣ