ನವದೆಹಲಿ: ಕೊಲೆ ಮತ್ತು ಅತ್ಯಾಚಾರ ಬೆದರಿಕೆ ಹಿನ್ನೆಲೆ ಬಿಜೆಪಿಯ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರಿಗೆ ದೆಹಲಿ ಪೊಲೀಸರು ಭದ್ರತೆ ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಬೆನ್ನಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಸ್ಥರಿಗೂ ಒಳಗೊಂಡಂತೆ ಭದ್ರತೆ ನೀಡಿದ್ದಾರೆ.
ಕಳೆದ ತಿಂಗಳು ಖಾಸಗಿ ವಾಹಿಯ ಚರ್ಚೆಯಲ್ಲಿ ಭಾಗಿಯಾಗಿದ್ದ ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಹಲವು ಇಸ್ಲಾಮಿಕ್ ದೇಶಗಳು ಖಂಡನೆ ಮಾಡಿದ್ದವು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅವರಿಗೆ ಬೆದರಿಕೆ ಕರೆಗಳು ಬರಲು ಆರಂಭಿಸಿವೆ. ಇದನ್ನೂ ಓದಿ: ಸಂಕುಚಿತ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ – OICಗೆ ವಿದೇಶಾಂಗ ಇಲಾಖೆಯ ತಿರುಗೇಟು
ಬೆದರಿಕೆ ಕರೆ ಬಂದ ಬೆನ್ನಲೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದ ನೂಪುರ್ ಶರ್ಮಾ, ತಮಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಇದೆ ಎಂದು ಆರೋಪಿಸಿ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 507 (ಅನಾಮಧೇಯ ಸಂವಹನದಿಂದ ಅಪರಾಧ ಬೆದರಿಕೆ) ಮತ್ತು 509 (ಮಹಿಳೆಯರ ನಮ್ರತೆಗೆ ಅವಮಾನ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಹಿನ್ನೆಲೆ ಎಫ್‍ಐಆರ್ ದಾಖಲಿಸಿದ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿರುವ ಅನಾಮಧೇಯ ವ್ಯಕ್ತಿಗಳನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ. ಈ ನಡುವೆ ಅವರಿಗೆ ಮತ್ತು ಅವರ ಕುಟುಂಬಕ್ಕೆ ಭದ್ರತೆಯನ್ನು ನೀಡುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಇದನ್ನೂ ಓದಿ: ಪೈಗಂಬರ್ ವಿರುದ್ಧ ವಿವಾದಾತ್ಮಕ ಹೇಳಿಕೆ – ಯಾರು ಈ ನೂಪುರ್ ಶರ್ಮಾ?
ಇದೇ ದೂರಿನಲ್ಲಿ ನೂಪುರ್ ಶರ್ಮಾ ಅವರು, ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಜನರ ಗುಂಪು ದ್ವೇಷ/ದ್ವೇಷವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮತ್ತೊಂದು ಅಂಶವನ್ನು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 153ಂ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಪ್ರಕರಣದಲ್ಲಿ ಸೇರ್ಪಡೆ ಮಾಡಿಕೊಂಡಿದ್ದು, ದೆಹಲಿ ಪೊಲೀಸರು ಟ್ವಿಟ್ಟರ್‌ಗೆ ನೋಟಿಸ್ ಕಳುಹಿಸಿ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.