ಹೈದರಾಬಾದ್: ಅಸಾದುದ್ದೀನ್ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಮಹಿಳಾ ಅಭ್ಯರ್ಥಿ ಮಾಧವಿ ಲತಾ (Madhavi Latha) ತಮ್ಮ ಕುಟುಂಬದ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ತೆಲಂಗಾಣದ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿರುವ ಮಾಧವಿ ಲತಾ ಅವರ ಕುಟುಂಬ ಬರೋಬ್ಬರಿ 221.38 ಕೋಟಿ ರೂ. ಆಸ್ತಿ (Assets) ಹೊಂದಿರುವುದಾಗಿ ಅವರು ಘೋಷಿಸಿಕೊಂಡಿದ್ದಾರೆ.
ಮಾಧವಿ ಲತಾ ಕುಟುಂಬ ಅವಳಿ ನಗರವಾದ ಸಿಕಂದರಾಬಾದ್‌ನಲ್ಲಿ ನೆಲೆಸಿದೆ. ಮಾಧವಿ ಲತಾ ಮತ್ತು ಕೊಂಪೆಲ್ಲಾ ವಿಶ್ವನಾಥ್ (Kompella Viswanath) ದಂಪತಿ 165.46 ಕೋಟಿ ರೂ. ಚರಾಸ್ತಿ, 55.91 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. 49 ವರ್ಷ ವಯಸ್ಸಿನ ಮಾಧವಿ ಲತಾ ಅವರು ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: ಓವೈಸಿ ವಿರುದ್ಧ ಸ್ಪರ್ಧಿಸ್ತಿರೋ ಬಿಜೆಪಿ ಅಭ್ಯರ್ಥಿಗೆ Y+ ಭದ್ರತೆ
ಮಾಧವಿ ಲತಾ ವೈಯಕ್ತಿಕವಾಗಿ ವಿವಿಧ ಕಂಪನಿಗಳಲ್ಲಿ 25.20 ಕೋಟಿ ರೂ. ಹೂಡಿಕೆ ಸೇರಿದಂತೆ ಒಟ್ಟು 31.31 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಜೊತೆಗೆ ವಿರಿಂಚಿ ಲಿಮಿಟೆಡ್‌ನಲ್ಲಿ 7.80 ಕೋಟಿ ರೂ. ಹೂಡಿಕೆ ಮಾಡಿದ್ದು, 3.78 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನ ಹೊಂದಿದ್ದಾರೆ. ಪತಿ ವಿಶ್ವನಾಥ್ ವಿರಿಂಚಿ ಲಿಮಿಟೆಡ್‌ನಲ್ಲಿ 52.36 ಕೋಟಿ ರೂ. ಮೌಲ್ಯದ ಷೇರುಗಳು ಒಳಗೊಂಡಂತೆ, 88.31 ಕೋಟಿ ರೂ.ನಷ್ಟು ಚರಾಸ್ತಿ ಹೊಂದಿದ್ದಾರೆ. ಅವರ ಮೂರು ಮಕ್ಕಳ ಹೆಸರಲ್ಲಿ 45 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಚರಾಸ್ತಿ ಇದೆ ಎಂಬುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಇಂದಿರಾ ವಿರುದ್ಧವೂ ಆಗಿತ್ತು ‘ಮಹಾಮೈತ್ರಿ’ – 1971 ರ ಚುನಾವಣೆ ಫಲಿತಾಂಶ ಏನಾಯ್ತು?
ಅಭ್ಯರ್ಥಿಯಾಗಿರುವ ಮಾಧವಿ 6.32 ಕೋಟಿ ರೂ.ಗಳಷ್ಟು ಸ್ಥಿರಾಸ್ತಿ ಹೊಂದಿದ್ದರೆ, ಪತಿ 49.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಆಸ್ತಿಗಳಲ್ಲಿ ಕೃಷಿಯೇತರ ಭೂಮಿ ಮತ್ತು ಹೈದರಾಬಾದ್ ಮತ್ತು ಸುತ್ತಮುತ್ತಲಿನ ವಾಣಿಜ್ಯ ಮತ್ತು ವಸತಿ ಕಟ್ಟಡಗಳು ಸೇರಿವೆ. ಇನ್ನೂ ಮಾಧವಿ ಲತಾ 90 ಲಕ್ಷ ರೂ.ಗಳ ಸಾಲ ಹೊಂದಿದ್ದರೆ, ಪತಿ 26.13 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ.
ಕ್ರಿಮಿನಲ್ ಪ್ರಕರಣವೂ ಇದೆ:
ಮಾಧವಿ ಲತಾ ಅವರು ಒಂದು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಕಳೆದ ವಾರವಷ್ಟೇ ಹೈದರಾಬಾದ್‌ನ ಬೇಗಂ ಬಜಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 295-ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಚುನಾವಣಾ ಪ್ರಚಾರದ ವೇಳೆ ಮಸೀದಿಗೆ ಬಾಣ ಬಿಡುವಂತೆ ಸನ್ನೆ ಮಾಡಿದ್ದರು. ಇದನ್ನೂ ಓದಿ: ಏ.26ರಂದು ರಾಜ್ಯದ ಮೊದಲ ಹಂತದ ಚುನಾವಣೆ: ಯಾವ ಕ್ಷೇತ್ರ-ಎಷ್ಟು ಮತದಾರರು? ಇಲ್ಲಿದೆ ವಿವರ…
ಮಾಧವಿ ಲತಾ ಯಾರು?: ಆರ್‌ಎಸ್‌ಎಸ್‌ನ ಕಟ್ಟಾ ಕಾರ್ಯಕರ್ತೆ, ಹೋರಾಟಗಾರ್ತಿ, ಭರತನಾಟ್ಯ ಕಲಾವಿದೆ ಮಾಧವಿ ಲತಾ (Madhavi Latha) ಅವರನ್ನು ಭಾರತೀಯ ಜನತಾ ಪಾರ್ಟಿ ಅಖಾಡಕ್ಕೆ ಇಳಿಸಿದೆ. ಈ ಮೂಲಕ ಓವೈಸಿ ವಿರುದ್ಧ ಈ ಬಾರಿ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿಜೆಪಿ ಬಿದ್ದಂತಿದೆ.
ನಿಜಾಮ್ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಪದವಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಧವಿ ಲತಾ ಅವರು ಪಡೆದಿದ್ದಾರೆ. ಇವರ ಮೂವರು ಮಕ್ಕಳಲ್ಲಿ ಇಬ್ಬರು ಐಐಟಿ ಮದ್ರಾಸ್‌ನಲ್ಲಿ ಓದುತ್ತಿದ್ದಾರೆ. ಹೋಮ್ ಸ್ಕೂಲಿಂಗ್ ನಡೆಸಿಯೇ ಮಕ್ಕಳನ್ನು ಐಐಟಿಗೆ ಕಳುಹಿಸಿರುವುದು ವಿಶೇಷವಾಗಿದೆ.
ವೃತ್ತಿಪರ ಭರತನಾಟ್ಯಂ ಡಾನ್ಸರ್ ಆಗಿರುವ 49 ವರ್ಷದ ಮಾಧವಿ ಲತಾ ಅವರು ಹೆಣ್ಣುಮಕ್ಕಳ ಶಿಕ್ಷಣದ ಪ್ರಾಯೋಜಕರಾಗಿದ್ದಾರೆ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸುವಲ್ಲಿ ಮತ್ತು ಪ್ರವಾಹ ನೆರವು ನೀಡುವಲ್ಲಿನ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ಹೈದರಾಬಾದ್ ಮೂಲದ ಪ್ರಮುಖ ಆರೋಗ್ಯ ಸಂಸ್ಥೆಯಾದ ವಿರಿಂಚಿ ಹಾಸ್ಪಿಟಲ್ಸ್‌ನ ಅಧ್ಯಕ್ಷರಾಗಿದ್ದಾರೆ. ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಿದ ಆರೋಪದ ನಂತರ ಆರೋಗ್ಯ ಅಧಿಕಾರಿಗಳು ಕೋವಿಡ್-19 ಚಿಕಿತ್ಸೆಗಾಗಿ ಅದರ ಪರವಾನಗಿಯನ್ನು ರದ್ದುಗೊಳಿಸಿದಾಗ ವಿರಿಂಚಿ ಹಾಸ್ಪಿಟಲ್ಸ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.